ನವದೆಹಲಿ,ಜು.10- ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸರಿಯಾಗಿಯೇ ಇದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸಂವಿಧಾನದ ಅಡಿಯಲ್ಲಿ ಕಡ್ಡಾಯವಾಗಿದೆ. ಬಿಹಾರದಲ್ಲಿ 2003ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿತ್ತು ಎಂದು ಪೀಠ ಹೇಳಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಸೂಚನೆ ವಿರೋಧಿಸಿ ಹಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯಲ್ಯ ಬಾಗ್ಚಿ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣಾ ಆಯೋಗ ಮಾಡುತ್ತಿರುವ ಕೆಲಸ ಸರಿ ಇದೆ.ಈ ಕ್ರಮ ಸಂವಿಧಾನದ ಆದೇಶಕ್ಕೆ ಅನುಗುಣವಾಗಿದೆ ಎಂದು ಹೇಳಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ಇಷ್ಟು ತಡವಾಗಿ ಏಕೆ ಪ್ರಾರಂಭಿಸಿದೆ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಕೇಳಿದೆ.ಅವರು ಸಂವಿಧಾನದ ಅಡಿಯಲ್ಲಿ ಏನುಮಾಡಬೇಕೋ ಅದನ್ನೇ ಮಾಡಿದ್ದಾರೆ, ಮಾಡಬಾರದ್ದನ್ನೇನು ಮಾಡಿಲ್ಲ ಎಂದು ಪೀಠ ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ 10 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದರಲ್ಲಿ ಱಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸೌ ಎಂಬ ಸರ್ಕಾರೇತರ ಸಂಸ್ಥೆ ಕೂಡ ಒಂದು ಅರ್ಜಿಯನ್ನು ಸಲ್ಲಿಸಿದೆ.
ಜೂ.24ರಂದು, ಚುನಾವಣಾ ಆಯೋಗ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ಸೂಚನೆಗಳನ್ನು ನೀಡಿತ್ತು. ಇದು ಅನರ್ಹ ಹೆಸರುಗಳನ್ನು ತೆಗೆದುಹಾಕುವ ಮತ್ತು ಅರ್ಹ ನಾಗರಿಕರನ್ನು ಮಾತ್ರ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮತದಾರರ ಪರಿಶೀಲನೆಗಾಗಿ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಸಮೀಕ್ಷೆಯ ಮೂಲಕ ಈ ಕಾರ್ಯ ನಡೆಸುತ್ತಿದ್ದಾರೆ.
ಸಂವಿಧಾನದ 326 ನೇ ವಿಧಿ ಮತ್ತು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 16 ರಲ್ಲಿ ವಿವರಿಸಿರುವಂತೆ ಈ ಪ್ರಕ್ರಿಯೆಯು ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ ಎಂದು ಚುನಾವಣಾ ಆಯೋಗವು ಭರವಸೆ ನೀಡಿದೆ. ಈ ಪಟ್ಟಿ ಪರಿಷ್ಕರಣೆ ಮಾಡದಿದ್ದರೆ ಹೊಸ ಮತದಾರರು, ಅಥವಾ ಸಾವನ್ನಪ್ಪಿರುವವರ ಕುರಿತು ದಾಖಲೆ ಲಭ್ಯವಾಗುವುದಿಲ್ಲ.
ಆರ್‌ಜೆಡಿ ಸಂಸದ ಮನೋಜ್ ಝಾ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾ, , ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಸಿಪಿಐ ನಾಯಕ ಡಿ. ರಾಜಾ, ಸಮಾಜವಾದಿ ಪಕ್ಷದ ಹರಿಂದರ್ ಸಿಂಗ್ ಮಲಿಕ್, ಶಿವಸೇನೆ (ಯುಬಿಟಿ) ನಾಯಕ ಅರವಿಂದ್ ಸಾವಂತ್, ಜೆಎಂಎಂನ ಸರ್ಫರಾಜ್ ಅಹದ್ ಮತ್ತು ಸಿಪಿಐ (ಎಂಎಲ್) ನ ದೀಪಂಕರ್ ಭಟ್ಟಾಚಾರ್ಯ ಕೂಡ ಚುನಾವಣಾ ಆಯೋಗದ ಆದೇಶವನ್ನು ರದ್ದುಗೊಳಿಸಲು ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.