Monday, March 10, 2025
Homeರಾಜ್ಯನಟಿ ರನ್ಯಾರಾವ್‌ ಪ್ರಕರಣದಲ್ಲಿ ಹವಾಲ ನಂಟು : ಬಿ.ವೈ.ವಿಜಯೇಂದ್ರ

ನಟಿ ರನ್ಯಾರಾವ್‌ ಪ್ರಕರಣದಲ್ಲಿ ಹವಾಲ ನಂಟು : ಬಿ.ವೈ.ವಿಜಯೇಂದ್ರ

Hawala connection in actress Ranya Rao case: B.Y. Vijayendra

ಬೆಂಗಳೂರು,ಮಾ.10- ಚಿತ್ರನಟಿ ರನ್ಯಾರಾವ್‌ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡು ತಪ್ಪಿತಸ್ಥರ ಮುಖವಾಡ ಕಳಚಿ ಕಾನೂನಿನ ಕುಣಿಕೆ ಬಿಗಿಯುವ ನಿಟ್ಟಿನಲ್ಲಿ ಪ್ರಾಮಾಣಿಕ ಕ್ರಮ ಕೈಗೊಳ್ಳದೇ ಹೋದರೆ ಇಡೀ ಸರ್ಕಾರ ಈ ಹಗರಣದ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ ಎಂಬ ನೈತಿಕ ಪ್ರಜ್ಞೆ ಮುಖ್ಯಮಂತ್ರಿಗಳಿಗಿರಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಪ್ರಕರಣದಲ್ಲಿ ಹವಾಲಾ ನಂಟು ಬೆಸೆದುಕೊಂಡಿರುವ ಶಂಖೆ ವ್ಯಕ್ತವಾಗಿದ್ದು, ಆರೋಪಿ ರನ್ಯಾ ರಾವ್‌ ಬಂಧನದ ಸಂದರ್ಭದಲ್ಲಿ ಸಚಿವರೊಬ್ಬರನ್ನು ಸಂಪರ್ಕಿಸಲು ಯತ್ನಿಸಿರುವುದು ಕಾಂಗ್ರೆಸ್‌‍ ಸರ್ಕಾರದ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಸ್ಪಷ್ಟ ಅನುಮಾನಗಳನ್ನು ಮೂಡಿಸಿದೆ ಎಂದಿದ್ದಾರೆ.

ರನ್ಯಾ ರಾವ್‌ ಅವರು ಅತ್ಯುನ್ನತ ಪೊಲೀಸ್‌‍ ಅಧಿಕಾರಿಯೊಬ್ಬರ ಪುತ್ರಿಯೂ ಆಗಿರುವ ಹಿನ್ನೆಲೆಯಲ್ಲಿ ಇಡೀ ಸರ್ಕಾರದ ವ್ಯವಸ್ಥೆಯ ಮೇಲೆ ಕರಿನೆರಳು ಆವರಿಸಿದೆ. ಸದರಿ ಪ್ರಕರಣ ನಮ ರಾಜ್ಯಕ್ಕೂ ಕಳಂಕ ತಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರಕರಣ ಕುರಿತು ವಾಸ್ತವ ಸ್ಥಿತಿಯನ್ನು ಜನತೆಗೆ ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.

ವರದಿಯಾಗಿರುವಂತೆ ಈ ಪ್ರಕರಣದಲ್ಲಿ ಸಚಿವರುಗಳು ಭಾಗಿಯಾಗಿದ್ದರೆ ಅದರ ಮಾಹಿತಿ ಈಗಾಗಲೇ ಮುಖ್ಯಮಂತ್ರಿಗಳ ಕೈ ಸೇರಿರುತ್ತದೆ. ಈ ಹಿಂದಿನ ಹಗರಣಗಳಂತೆ ಈ ಪ್ರಕರಣದಲ್ಲೂ ಸರ್ಕಾರ ಭ್ರಷ್ಟರನ್ನು ರಕ್ಷಿಸಲು ಮುಂದಾದರೆ ಸದ್ಯ ಸಿಬಿಐ ತನಿಖೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್‌‍ ಸರ್ಕಾರ ಮುಖಭಂಗಕ್ಕೀಡಾಗುವುದಂತೂ ಖಚಿತ. ಚಿನ್ನ ಕಳ್ಳ ಸಾಗಣೆ ಕೇವಲ ನಟಿಯೊಬ್ಬರನ್ನು ಮಾತ್ರ ಸುತ್ತುವರೆದಿಲ್ಲ , ಇದರ ವ್ಯೂಹದಲ್ಲಿ ಬಹುದೊಡ್ಡ ಜಾಲ ಕೆಲಸ ಮಾಡುತ್ತಿರುವುದು ಈಗಾಗಲೇ ತನಿಖೆಯಿಂದ ಹೊರಬರುತ್ತಿದೆ ಎಂದು ಹೇಳಿದ್ದಾರೆ.

ಒಂದೇ ದಿನದಲ್ಲಿ 12.36 ಕೋಟಿ ಮೌಲ್ಯದ ಚಿನ್ನ ಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದಿರುವ ರನ್ಯಾರಾವ್‌ ಈವರೆವಿಗೂ ಅದೆಷ್ಟು ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಣೆ ಮಾಡಿರಬಹುದು? ಇದೇ ರೀತಿಯಲ್ಲಿ ಇನ್ನೆಷ್ಟು ಮಂದಿ ಈ ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ಆಳವಾಗಿ ತನಿಖೆ ನಡೆಯಬೇಕಿದೆ. ಸಿಬಿಐ ತನಿಖೆ ಕೈಗೊಂಡಿರುವುದರಿಂದ ಈ ತನಿಖೆ ತಾರ್ಕಿಕ ಅಂತ್ಯ ತಲುಪಲಿದೆ ಎಂಬ ವಿಶ್ವಾಸವನ್ನು ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News