ಬೆಂಗಳೂರು,ಜ.31- ಅಭಿವೃದ್ಧಿ ಮಾಡದೇ, ಬಡವರಿಗೆ ಅನುಕೂಲ ಮಾಡಿಕೊಡದೆ, ಮಠ ಮಂದಿರ ಕಟ್ಟಿದವರಿಗೆ ಮತ ಹಾಕುವುದಾದರೆ ಗ್ಯಾರಂಟಿ ಯೋಜನೆಗಳ ಅಗತ್ಯವಾದರೂ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಾನು ಅದೇ ವಿಚಾರವನ್ನು ಪ್ರತಿಪಾದಿಸಿದ್ದೇನೆ ಎಂದು ಮಾಗಡಿ ಕ್ಷೇತ್ರದ ಶಾಸಕ ಹಾಗೂ ಕೆಆರ್‍ಐಡಿಎಲ್‍ನ ಅಧ್ಯಕ್ಷ ಡಾ.ಎಚ್.ಸಿ.ಬಾಲಕೃಷ್ಣ ಸಮರ್ಥಿಸಿಕೊಂಡಿದ್ದಾರೆ.
ಬಾಲಕೃಷ್ಣ ಅವರ ಹೇಳಿಕೆ ತೀವ್ರ ವಿವಾದಗಳನ್ನು ಹುಟ್ಟುಹಾಕಿರುವ ನಡುವೆಯೇ ತಮ್ಮ ಹೇಳಿಕೆಯನ್ನು ಪುನರ್ ಉಚ್ಛರಿಸಿರುವ ಅವರು, ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೂ ಮುನ್ನ ಗ್ಯಾರಂಟಿಯೋಜನೆಗಳ ಭರವಸೆ ನೀಡಿತ್ತು. ಮನೆಮನೆಗೆ ಸಹಿ ಮಾಡಿದ ಕರಪತ್ರಗಳನ್ನು ಹಂಚಿತ್ತು. ಜನ ಅದಕ್ಕೆ ಮನ್ನಣೆ ನೀಡಿ, ಮತ ಹಾಕಿ ಪಕ್ಷವನ್ನು ಅಕಾರಕ್ಕೆ ತಂದಿದ್ದಾರೆ ಎಂದರು.
ಆರ್ಥಿಕ ಸವಾಲುಗಳಿದ್ದಾಗಿಯೂ ನಮ್ಮ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಬಿಜೆಪಿಯವರು ಮಠ ಮಂದಿರ ಕಟ್ಟಿದ್ದೇವೆ ಎಂದು ಮತ ಕೇಳುತ್ತಿದ್ದಾರೆ. ಜನ ಅವರಿಗೇ ಮತ ಹಾಕುವುದಾದರೆ ಗ್ಯಾರಂಟಿಗಳ ಅವಶ್ಯಕತೆ ಇಲ್ಲ ಎಂದಾಗುತ್ತದೆ. ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಕೊಡಿ ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದ್ದೇನೆ ಎಂದರು.
ಸರ್ಕಾರದ ಅಧಿಕಾರಿಗಳು ಸಂವಿಧಾನ ಮತ್ತು ಜಾತ್ಯತೀತತೆಗೆ ಬದ್ಧರಾಗಿರಬೇಕು : ಡಿಕೆಶಿ ವಾರ್ನಿಂಗ್
ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವ ಬದ್ಧತೆಯನ್ನು ಕಾಂಗ್ರೆಸ್ ಹೊಂದಿದೆ. 5 ವರ್ಷ ಮಾತ್ರವಲ್ಲ. ಮುಂದಿನ ಬಾರಿಯೂ ಅಕಾರಕ್ಕೆ ಬಂದು 10 ವರ್ಷ ಕಾಲ ಗ್ಯಾರಂಟಿಗಳನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ತುಂಬಬೇಕಿದೆ. ಕೆಲಸ ಮಾಡಿದವರು ಪ್ರತಿಫಲ ಕೇಳುವುದು ಸಹಜ. ಜನ ಮಂತ್ರಾಕ್ಷತೆಗೆ ಮತ ಹಾಕಬೇಕೋ ಅಥವಾ ಅಭಿವೃದ್ಧಿಗೆ ಬೆಂಬಲಿಸಬೇಕೋ ಎಂಬುದನ್ನು ತೀರ್ಮಾನಿಸಬೇಕಿದೆ.
ಮಠ ಮಂದಿರಗಳನ್ನು ಬಿಡಬೇಕಿದೆ. ಅಭಿವೃದ್ಧಿಗೆ ಗಮನ ಕೊಡಬೇಕಿದೆ. ನಾನೊಬ್ಬ ಹಿಂದೂ. ಬೆಳಗ್ಗೆ ಎದ್ದು ಕಾಲಭೈರವೇಶ್ವರನನ್ನು ಪೂಜಿಸಲು ಹೋಗುತ್ತೇನೆ. ಹಾಗೆಂದು ಇನ್ನೊಂದು ಧರ್ಮವನ್ನು ದ್ವೇಷಿಸುವುದೇ ಧ್ಯೇಯವಾಗಬಾರದು. ಜನರಿಗೆ ಬದುಕು ಕಟ್ಟಿಕೊಡುವತ್ತ ಕೆಲಸ ಮಾಡಬೇಕಿದೆ ಎಂದರು.
ಜೆಡಿಎಸ್ ಪಕ್ಷಕ್ಕೂ ಮುಗಿದ ಅಧ್ಯಾಯ. ಅವರಿಗೆ ಬಿಜೆಪಿಯ ಊರುಗೋಲು ಬೇಕು. ಅದಕ್ಕಾಗಿ ಜೋತು ಬಿದ್ದಿದ್ದಾರೆ. ಈ ಹಿಂದೆ ಜೆಡಿಎಸ್ ನಾಯಕರು ಬಿಜೆಪಿ ಮತ್ತು ಸಂಘ ಪರಿವಾರದ ಬಗ್ಗೆ ಏನೆಲ್ಲಾ ಹೇಳಿದ್ದರು ಎಂದು ನೆನಪಿಸಿಕೊಳ್ಳಲಿ. ಈಗ ಕೇಸರಿ ಶಾಲು ಹಾಕಿಕೊಂಡು ನಾಟಕ ಮಾಡುತ್ತಾರೆ ಎಂದು ಬಾಲಕೃಷ್ಣ ಕಿಡಿಕಾರಿದರು.