ಬೆಂಗಳೂರು,ಡಿ.21 – ರಾಜ್ಯದ ತೆಂಗು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೆಡಿಎಸ್ ಮನವಿ ಮಾಡಿದೆ. ಜೆಡಿಎಸ್ ರಾಪ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು, ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್‍ಡಿ ರೇವಣ್ಣ, ಶಾಸಕ ಸಿಎನ್ ಬಾಲಕೃಷ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರನ್ನೊಳಗೊಂಡ ಜೆಡಿಎಸ್ ನಿಯೋಗ ಪ್ರಧಾನಿ ಭೇಟಿ ಮಾಡಿ ವಿಶೇಷ ಪರಿಹಾರ ಪ್ಯಾಕೇಜ್‍ಗೆ ಮನವಿ ಮಾಡಿದೆ.
ಬರಗಾಲ ಹಾಗೂ ಕೀಟ ರೋಗಗಳಿಂದ ತೆಂಗು ಬೆಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ.ನಂತೆ ನಪೇಡ್ ಮೂಲಕ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಹಾಸನ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ಮೈಸೂರು, ಚಿತ್ರದುರ್ಗ, ರಾಮನಗರ ಜಿಲ್ಲೆಗಳ 5.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ತೆಂಗು ಬೆಳೆಗಳನ್ನೆ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ.
ಕೊಬ್ಬರಿ ಬೆಲೆ ಕುಸಿತದಿಂದಾಗಿ ಸಾಕಷ್ಟು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತೆಂಗು ಬೆಳೆಗಾರರಿಗೆ ಹಣಕಾಸಿನ ವಿಶೇಷ ಬರಪರಿಹಾರ ಪ್ಯಾಕೇಜ್ ಘೋಷಿಸಬೇಕು, ಬರ ಪ್ರದೇಶದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ತೆಂಗು ಬೆಳೆಗಾರರಿಗೆ 25 ಸಾವಿರ ರೂ. ನೀಡಬೇಕು ಎಂದು ಮನವಿ ಮಾಡಲಾಗಿದೆ.
ಲೋಕಸಭೆ ಚುನಾವಣೆ ಸ್ಪರ್ಧೆಗೆ ಖರ್ಗೆ ನಿರಾಸಕ್ತಿ
ಸೀಟು ಹಂಚಿಕೆ ಸಮಸ್ಯೆಯಿಲ್ಲ
ನವದೆಹಲಿಯಲ್ಲಿ ಪ್ರಧಾನಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ನಾವು ಸೇರಿದ್ದು, ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಸೀಟು ಹಂಚಿಕೆಗೆ ಸಂಬಂದಿಸಿದಂತೆ ಯಾವುದೇ ಸಮಸ್ಯೆಯಿಲ್ಲ, ಗೆಲ್ಲಲಲು ಸಾದ್ಯವಿರುವ ಕ್ಷೇತ್ರಗಳನ್ನಷ್ಟೇ ಕೇಳಿದ್ದೇವೆ. ಪಟ್ಟಿಯೂ ಸಿದ್ದವಿದೆ. ಬಿಜೆಪಿ, ಜೆಡಿಎಸ್ ಸೇರಿ ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲಬೇಕೆಂಬುವುದು ನಮ್ಮ ಉದ್ದೇಶ.
ಸಂಸತ್‍ನಲ್ಲಿ ವಿರೋಧಪಕ್ಷ ಇರಬೇಕೆಂದು ಪ್ರತಿಪಾದಿಸುವ ಕಾಂಗ್ರೆಸ್, ರಾಜ್ಯದಲ್ಲಿ ವಿರೋಧಪಕ್ಷಗಳ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ದೆಹಲಿಯಲ್ಲಿ ವಿರೋಧ ಪಕ್ಷ ಇದ್ದರೆ ಸಾಕು, ರಾಜ್ಯದಲ್ಲಿ ವಿರೋಧಪಕ್ಷ ಬೇಡ ಎಂಬ ಮನೋಭಾವವಿದೆ ಎಂದು ಅವರು ಆರೋಪಿಸಿದರು. ರಾಜ್ಯ ರಾಜಕೀಯದಲ್ಲಿ ಮುಂದೇನಾಗುತ್ತಿದೆ ಎಂಬುದನ್ನು ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾಡು-ಗೊಲ್ಲ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ದೇವೇಗೌಡರು ಪ್ರಧಾನಿ ಬಳಿ ಮನವಿ ಮಾಡಿದರು. ರಾಜ್ಯದ ನೀರಾವರಿ ಯೋಜನೆಗಳು, ಕೊಬ್ಬರಿ ಬೆಂಬಲ ಬೆಲೆ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.