ಬೆಂಗಳೂರು,ಅ.1- ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಉಂಟಾಗಿರುವ ಗೊಂದಲ ಪರಿಹರಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಇಂದು ಪಕ್ಷದ ಶಾಸಕರು ಹಾಗೂ ಮುಖಂಡರ ಸಭೆಯನ್ನು ನಡೆಸಿದರು.
ಬಿಡದಿ ಬಳಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ಸಭೆ ನಡೆಸಿ, ಶಾಸಕರು ಹಾಗೂ ಪಕ್ಷದ ಮುಖಂಡರಲ್ಲಿ ಮೈತ್ರಿಯ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವ ಪ್ರಯತ್ನ ಮಾಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿ ಅಕ್ಟೋಬರ್ 16 ರಂದು ಸಮಾನ ಮನಸ್ಕರ ಸಭೆ ಕರೆದಿರುವ ಬೆನ್ನಲ್ಲೇ ಗೌಡರು ಹಾಗೂ ಕುಮಾರಸ್ವಾಮಿ ಸಭೆ ಕರೆದು ಮೈತ್ರಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಪಕ್ಷಕ್ಕಾಗುವ ಅನುಕೂಲ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅದರ ಅಗತ್ಯ, ಪಕ್ಷದ ಉಳಿವು ಮತ್ತು ಬೆಳವಣಿಗೆಗೆ ಏನೆಲ್ಲಾ ಪ್ರಯತ್ನ ಮಾಡಬೇಕಾಗಿದೆ ಎಂಬುದರ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 209 ರೂ. ಏರಿಕೆ
ಮೈತ್ರಿಯಿಂದ ಪಕ್ಷದ ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಲಾಗುತ್ತದೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದರು. ಆದರೂ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನಗೊಂಡು ಪಕ್ಷ ಬಿಡುವ ನಿರ್ಧಾರ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಶಾಸಕರು, ಮಾಜಿ ಶಾಸಕರು, ಪ್ರಮುಖ ಮುಖಂಡರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿದ ಅಭ್ಯರ್ಥಿಗಳ ಸಭೆ ಕರೆದು ಅಸಮಾಧಾನ ತಣಿಸುವ ಪ್ರಯತ್ನ ಮಾಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ. ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಉಳಿಸಿಕೊಂಡು ಉಳಿದ ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯಾವುದೇ ಕಾರಣಕ್ಕೂ ಮೈತ್ರಿಯಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು, ಕ್ಷೇತ್ರ ಹಾಗೂ ಸ್ಥಳೀಯ ಮಟ್ಟದಲ್ಲಿ ಎದುರಾಗುವ ಗೊಂದಲಗಳನ್ನು ಬಗೆಹರಿಸುತ್ತೇವೆ. ಪಕ್ಷದ ಉಳಿವಿಗಾಗಿ ಕೆಲವೊಂದು ಅನಿವಾರ್ಯತೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ.
ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿ ಮೂವರೂ ನೀರುಪಾಲು
ಆಪರೇಷನ್ ಹಸ್ತ ತಪ್ಪಿಸಲು ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿವೆ. ಮುಂಬರುವ ನಗರ ಸ್ಥಳೀಯ ಸಂಸ್ಥೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಶಾಸಕರು ಹಾಗೂ ಮುಖಂಡರಿಂದ ಅಭಿಪ್ರಾಯ ಪಡೆದು ವರಿಷ್ಠರು ಮಾರ್ಗದರ್ಶನ ಮಾಡಿದ್ದಾರೆ.ಒಟ್ಟಾರೆ ಮೈತ್ರಿಯ ಸ್ವರೂಪದ ಬಗ್ಗೆ ಮನವರಿಕೆ ಮಾಡಿಕೊಟ್ಟು ಬಹಿರಂಗವಾಗಿ ಅಸಮಾಧಾನ ಹೊರಹಾಕದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.