ಬೆಂಗಳೂರು,ಜು.13- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ದಾನವಾಗಿ ಬಂದಿದ್ದ ಜಮೀನು ಮುಡಾಗೆ ಸೇರಿದ್ದಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಮುಖ್ಯಮಂತ್ರಿಯವರ ಪತ್ನಿಗೆ ದಾನವಾಗಿ ಕೃಷಿ ಜಮೀನು ಬಂದಿರುವ ಮಾಹಿತಿ ಇದೆ. ಆದರೆ 1997ರಲ್ಲೇ ಜಮೀನು ಭೂಸ್ವಾಧೀನವಾಗಿದ್ದು, ಮುಡಾದಿಂದ ನ್ಯಾಯಾಲಯಕ್ಕೆ 3.16 ಲಕ್ಷ ರೂ. ಹಣ ಪಾವತಿಯಾಗಿದೆ ಎಂದರು.
ಮುಡಾ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹಣ ಪಾವತಿಸಿದ ಮೇಲೆ ಜಮೀನು ಮೂಡಾ ಸ್ವತ್ತಾಗಿದೆ. 2004ರಲ್ಲಿ ದೇವರಾಜು ಎಂಬುವರಿಂದ ಮಲ್ಲಿಕಾರ್ಜುನ ಸ್ವಾಮಿ ಎಂಬುವರು ಖರೀದಿಸಿರುವ ಮಾಹಿತಿ ಇದೆ. ನಂತರ ಆ ಜಮೀನನ್ನ 2005ರಲ್ಲಿ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ. ಆಗ ಉಪ ಮುಖ್ಯಮಂತ್ರಿಯಾಗಿದ್ದವರೇ ಸಿದ್ದರಾಮಯ್ಯ ಅವರೇ ಎಂದು ಹೇಳಿದರು.
ನಿಂಗ ಅಲಿಯಾಸ್ ಜವರ ಎಂಬ ವ್ಯಕ್ತಿ ಹೆಸರಿನಲ್ಲಿ 1992-93ರಲ್ಲಿ 3 ಎಕರೆ 16 ಗುಂಟೆ ಜಮೀನು ಪೌತಿ ಖಾತೆಯಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಅನ್ನು ಸತ್ತ ವ್ಯಕ್ತಿ ಹೆಸರಿನಲ್ಲಿ ಮಾಡಲಾಗಿದೆ. ಆಗ ಉಪಮುಖ್ಯಮಂತ್ರಿಯಾಗಿದ್ದವರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಪತ್ನಿಯ ತಮ ದಾನವಾಗಿ ಈ ಜಮೀನನ್ನು ನೀಡಿರುವುದಾಗಿ ಹೇಳಲಾಗಿದೆ. ಆದರೆ ಮುಡಾ ಜಮೀನು ದೇವರಾಜು ಅವರಿಗೆ ಹೇಗೆ ಬಂತು? ಸತ್ತ ವ್ಯಕ್ತಿಗೆ ಡಿನೋಟಿಫಿಕೇಷನ್ ಹೇಗಾಯ್ತು ಎಂಬ ವಿವರವನ್ನು ಮುಖ್ಯಮಂತ್ರಿ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ತಮ ಆರೋಪಕ್ಕೆ ಸಂಬಂಧಪಟ್ಟಂತೆ ಮೂಡಾದ ಯೋಜನಾ ನಕ್ಷೆ ಸೇರಿದಂತೆ ಹಲವು ದಾಖಲೆಗಳನ್ನು ಪ್ರದರ್ಶಿಸಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪತ್ನಿ ಹೆಸರಿಗೆ ದಾನವಾಗಿ ಬಂದಿರುವ ಜಮೀನಿನ ಮಾಹಿತಿಯನ್ನು ಸಿದ್ದರಾಮಯ್ಯ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಟೀಕಿಸಿದರು.
ಮುಡಾ ಹಗರಣ ಬೇರೆ, ಮುಖ್ಯಮಂತ್ರಿ ಕುಟುಂಬದ ಅವ್ಯವಹಾರದ ಪ್ರಶ್ನೆಯೇ ಬೇರೆ. ಮುಖ್ಯಮಂತ್ರಿಯ ಮೂಗಿನ ನೇರಕ್ಕೆ ಇದು ನಡೆದಿದೆ. ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಸ್ಥಾನದಲ್ಲಿ ನಡೆದ ಅವ್ಯವಹಾರವಾಗಿದ್ದು,ಇದು ಅಧಿಕಾರದ ದುರುಪಯೋಗವಾಗಿದೆ ಎಂದು ಆರೋಪಿಸಿದರು.
62 ಕೋಟಿ ರೂ. ಬೆಲೆ ಬಾಳುವ ಆಸ್ತಿಗೆ ಬದಲಿ ನಿವೇಶನ ಪಡೆದಿರುವುದಾಗಿ ಹೇಳಿದ್ದಾರೆ. ಎಲ್ಲಿ ಭೂಸ್ವಾಧೀನವಾಗಿದೆಯೋ ಆ ಜಾಗದಲ್ಲಿ ಎರಡು ನಿವೇಶನ ಪಡೆಯಬಹುದು ಎಂಬ ನಿಯಮವಿದೆ. ಅದರೆ ಬೇರೆ ಕಡೆ ನಿವೇಶವನ್ನು ಪಡೆದಿದ್ದಾರೆ. ಇದು ಅವರ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ತಿಳಿಸಿದರು.
ಎಲ್ಲರ ಮೇಲೆ ಕ್ರಮವಾಗಲಿ:
ಮೂರ್ನಾಲ್ಕು ಸಾವಿರ ಕೋಟಿ ರೂ. ಮೂಡ ಹಗರಣವಾಗಿದ್ದು, ಆರೋಪ ಯಾರ್ಯಾರ ಮೇಲೆ ಬಂದಿದೆಯೋ ಅವರ ಮೇಲೆ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ ಎಂದರು.
ಮುಖ್ಯಮಂತ್ರಿಯವರ ಮೇಲೆ ಕೇಳಿಬಂದಿರುವ ಆರೋಪಕೆ ಸಂಬಂಧಿಸಿದಂತೆ ನಾನು ಮಾಹಿತಿ ಒದಗಿಸಿದ್ದೇನೆ. ಯಾರಾದರೂ ವಕೀಲರು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ ಪಡೆದು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿದರು.
ಹಿಂದುಳಿದ ನಾಯಕ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ ಪ್ರತಿಪಕ್ಷಗಳು ಟೀಕೆಮಾಡುತ್ತಿವೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ,ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದಾಗ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವೆಯಾಗಲ್ಲವೆ? ಚಂದ್ರಶೇಖರ್ ಎಂಬುವರ ಡೆತ್ನೋಟ್ ಇಲ್ಲದಿದ್ದರೆ ಏನು ಮಾಡುತ್ತಿದ್ದಿರಿ? ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಂಡಪ್ಪ ಕಾಶೆಂಪುರ್, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಎಸ್.ಎಲ್.ಭೋಜೇಗೌಡ, ಜೆಡಿಎಸ್ ಮುಖಂಡರಾದ ಆರ್.ಪ್ರಕಾಶ್ ಮತ್ತಿತರರು ಹಾಜರಿದ್ದರು.