ಬೆಂಗಳೂರು,ಅ.29- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೂರನೇ ದಿನವಾದ ಇಂದು ತಮ್ಮ ಚುನಾವಣಾ ಪ್ರಚಾರವನ್ನು ಇಂದು ಮುಂದುವರೆಸಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಸಹ ಇಂದು ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಪುತ್ರನ ಪರವಾಗಿ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು.
ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರಿನಿಂದ ಇಂದು ಬೆಳಿಗ್ಗೆ ಚುನಾವಣಾ ಪ್ರಚಾರ ಆರಂಭಿಸಿ ಮತಯಾಚನೆ ಕೈಗೊಂಡರು. ಬೆಳಿಗ್ಗೆ ಕೋಟೆಮಾರನಹಳ್ಳಿ, ಬೈರಾಪಟ್ಟಣ, ದೇವರಹಳ್ಳಿ, ವಳಗೆರೆದೊಡ್ಡಿ ಹಾಗೂ ಹೊಸೂರುದೊಡ್ಡಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಮಧ್ಯಾಹ್ನ ಸಂಕಲಗೆರೆ, ಮತ್ತಿಕೆರೆ, ಶೆಟ್ಟಹಳ್ಳಿ, ಮುದುಗೆರೆ ಪ್ಲಾಂಟೇಷನ್, ಬೆಳಕೆರೆ, ಮಾರ್ಚನಹಳ್ಳಿ, ಪುಟ್ಟಪ್ಪನದೊಡ್ಡಿ, ಕೋಲೂರು ಗಾಂಧಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಸಂಜೆ ಕೋಲೂರು, ಸೀಬನಹಳ್ಳಿ, ಮುದುಗೆರೆ ಗೇಟ್‌ಗಳಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್-ಬಿಜೆಪಿಯ ನಾಯಕರು, ಸ್ಥಳೀಯ ಮುಖಂಡರು ಪಾಲ್ಗೊಂಡು ಮತಯಾಚನೆ ನಡೆಸಿದರು.
ಈ ನಡುವೆ ಇಂದು ಬೆಳಿಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶಾರದಾ ಚಂದ್ರಶೇಖರ್‌ರವರು ಕಾಂಗ್ರೆಸ್ ತೊರೆದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು. ನಿಖಿಲ್ ಕುಮಾರಸ್ವಾಮಿ ಪ್ರಚಾರ ಕೈಗೊಳ್ಳುವ ಮುನ್ನ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈರಶೆಟ್ಟಿಹಳ್ಳಿ ಗ್ರಾಮದ ಪ್ರಮುಖ ಮುಖಂಡರು ಹಾಗೂ ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.