ಬೆಂಗಳೂರು, ಮೇ 9- ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹೆಚ್.ಡಿ.ರೇವಣ್ಣ ಅವರ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠದಲ್ಲಿ ಹೆಚ್.ಡಿ.ರೇವಣ್ಣಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ಪ್ರಬಲ ವಾದ ಮಂಡಿಸಿದರು.
ರೇವಣ್ಣ ಅವರು, ಕಸ್ಟಡಿಯಲ್ಲಿ ಇರುವಾಗ ತನಿಖೆಗೆ ಸಹಕರಿಸಿದ್ದಾರೆ. ತನಿಖಾಧಿಕಾರಿಗೆ ತೊಂದರೆ ಕೊಟ್ಟಿಲ್ಲ. ಈ ಪ್ರಕರಣವನ್ನು ಬಹಳ ವಿಜೃಂಭಿಸುವಂತೆ ಮಾಡಲಾಗಿದೆ.
ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಪ್ರಕರಣದಲ್ಲಿ ಉಲ್ಲೇಖಿಸಿರುವಂತೆ ಸಂತ್ರಸ್ತೆ ಎಲ್ಲಿ ಸಿಕ್ಕಿದ್ದಾರೆ ಎಂಬ ಮಾಹಿತಿ ಇಲ್ಲ. ಆಕೆ ಹೇಗಿದ್ದಾರೆ. ಏನಾಗಿದ್ದಾರೆ ಎಂಬ ಬಗ್ಗೆ ಎಸ್ಐಟಿ ಏನೂ ಹೇಳಿಲ್ಲ.
ವಿಮಾನ ಹೈಜಾಕ್ ಮಾಡಿ ಭಯೋತ್ಪಾದಕರು ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡ ಪ್ರಕರಣದ ನಂತರ 364ಎ ಸೇರಿಸಲಾಗಿದೆ. ನನ್ನ ಕಕ್ಷಿದಾರರ ಮೇಲೆ ಈ ಪ್ರಕರಣ ದಾಖಲಿಸಿ ಭಯೋತ್ಪಾದಕರಂತೆ ಬಿಂಬಿಸಲಾಗುತ್ತಿದೆ. ತೊಂದರೆ ಕೊಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ.
ರೇವಣ್ಣ ಅವರ ವಿರುದ್ಧ ದಾಖಲಿಸಿರುವ ಪ್ರಕರಣಗಳು ಕಾನೂನು ಬಾಹಿರ. ಪ್ರಕರಣಗಳು ರೇವಣ್ಣ ಅವರಿಗೆ ಅನ್ವಯಿಸುವುದಿಲ್ಲ. ಬೇಲೇಬಲ್ ಸೆಕ್ಷನ್ ಬಳಿಕ ತರಾತುರಿಯಲ್ಲಿ ಅವರ ಮೇಲೆ ಕೇಸ್ ಹಾಕಲಾಗಿದೆ. ಈ ಪ್ರಕರಣ ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ಪ್ರಚಾರದ್ದಾಗಿದೆ ಎಂದು ನಾಗೇಶ್ ಸುದೀರ್ಘ ವಾದ ಮಂಡಿಸಿದರು.
ಅವರಿಗೆ ಜಾಮೀನು ನೀಡಿದರೆ ದಾಖಲೆಗಳು ನಾಶವಾಗುವುದಿಲ್ಲ. ದಾಖಲೆ, ಕಂದಾಯ ಜಾಗ ಬದಲಾಗುತ್ತದೆಯೇ? ನನ್ನ ಕಕ್ಷಿದಾರರಿಗೆ ಜಾಮೀನು ಕೊಡಬೇಕು ಎಂದು ಮನವಿ ಮಾಡಿದರು.
ರೇವಣ್ಣ ಪರ ವಕೀಲರು ಒಂದುವರೆ ಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿದ್ದಾರೆ. ನಮಗೆ ವಾದ ಮಂಡಿಸಲು ಕಾಲಾವಕಾಶ ಬೇಕು. ಅದಕ್ಕೆ ಸಮಯ ನಿಗದಿ ಮಾಡಬೇಕು ಎಂದು ಎಸ್ಐಟಿಪರ ವಕೀಲೆ ಜಾಯ್ನ ಕೋಠಾರಿ ಮನವಿ ಮಾಡಿದರು.
ನೀವು ಮನವಿ ಮಾಡುವುದನ್ನು ಬಿಟ್ಟು ವಾದ ಮಂಡಿಸಿ ಎಂದು ನ್ಯಾಯಾಲಯ ವಕೀಲರಿಗೆ ಸೂಚನೆ ನೀಡಿತು.
ವಾದ ಮಂಡಿಸಿದ ಕೋಠಾರಿ ಅವರು, ಆರೋಪಿಯ ಪುತ್ರ ಸಂತಸ್ತೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದು ದೊಡ್ಡ ಮತ್ತು ಅತಿ ದೊಡ್ಡ ಅಪರಾಧ. ಸಂತ್ರಸ್ತೆಯನ್ನು ಅಪಹರಿಸಿರುವುದು ನಿಜವಲ್ಲವೇ? ರೇವಣ್ಣ ವಿರುದ್ಧ 364ರಡಿ ಪ್ರಕರಣ ದಾಖಲಾಗಿದೆ. ಇದು ಗಂಭೀರ ಪ್ರಕರಣವಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಜಾಮೀನು ಪಡೆದು ಬೇರೆ ಮಹಿಳೆಯರನ್ನು ಕಿಡ್ನಾಪ್ ಮಾಡಿದರೆ ಗತಿಯೇನು? ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರೇವಣ್ಣ ಪ್ರಭಾವ ಹೊಂದಿದ್ದಾರೆ. ಹೆಚ್ಚಿನ ವಾದ ಮಂಡಿಸಲು ಸೋಮವಾರ ಅವಕಾಶ ನೀಡಬೇಕು ಎಂದು ಕೋರಿದರು.
ವಾದ ವಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.