Saturday, November 23, 2024
Homeರಾಜ್ಯನಾಳೆ ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ನಾಳೆ ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು, ಮೇ 12-ಮಹಿಳೆಯೊಬ್ಬರ ಅಪಹರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿಯ ಮುಂದುವರೆದ ವಿಚಾರಣೆ ನಾಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ವಿಧಿಸಿದ್ದ ರೇವಣ್ಣ ಅವರ ಏಳು ದಿನಗಳ ನ್ಯಾಯಾಂಗ ಬಂಧನದ ಅವಧಿ ಮಂಗಳವಾರ ಮುಗಿಯಲಿದೆ. ನ್ಯಾಯಾಂಗ ಬಂಧನದಲ್ಲಿರುವ ಹೆಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧಿಶರಾದ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠವು ವಾದ ಮತ್ತು ಪ್ರತಿವಾದ ಆಲಿಸಿದ ಬಳಿಕ ಸೋಮವಾರಕ್ಕೆ ಮುಂದೂಡಿತ್ತು.

ಹೆಚ್.ಡಿ.ರೇವಣ್ಣ ಅವರ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪ್ರಬಲ ವಾದ ಮಂಡಿಸಿ ನನ್ನ ಕಕ್ಷಿದಾರರ ವಿರುದ್ಧ ಅನಗತ್ಯ ಆರೋಪ ಮಾಡಲಾಗಿದೆ. ಅವರ ಮೇಲೆ ಯಾವುದೇ ಗಂಭೀರ ಸ್ವರೂಪದ ಆರೋಪಗಳು ಇಲ್ಲ. ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‍ಐಟಿಪರ ವಕೀಲೆ ಜಾಯ್ನ ಕೋಠಾರಿ ಅವರು, ರೇವಣ್ಣ ಅವರು ಪ್ರಭಾವಿ ನಾಯಕರಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಾದ ಮಂಡಿಸಲು ಇನ್ನೂ ಕಾಲಾವಕಾಶ ಬೇಕು ಎಂದು ಮನವಿ ಮಾಡಿದ್ದರು.

ಎರಡೂ ಕಡೆಯ ವಾದ ವಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ನಾಳೆ ನಡೆಯಲಿರುವ ವಿಚಾರಣೆಯ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ರೇವಣ್ಣ ಅವರಿಗೆ ಜಾಮೀನು ಸಿಗಲಿದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES

Latest News