ಹಾಸನ,ಮೇ.23-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದು ವರ್ಷದಲ್ಲಿ ರಾಜ್ಯಕ್ಕೆ ಏನು ಕೊಡುಗೆ ನೀಡಿದೆ. ಅವರ ಮಂತ್ರಿಗಳೇ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ ಎಂದು ಶಾಸಕ ಎಚ್.ಡಿ ರೇವಣ್ಣ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮಲ್ಲಿ ಇದ್ದು ಆ ಕಡೆ ಹೋಗಿದ್ದಾರಲ್ಲ ಕೆಲವರು ಸರ್ಕಾರ ಬಂದು ಒಂದು ವರ್ಷ ಆಗಿದೆ ಏನು ಕೊಡುಗೆ ಕೊಡಿಸಿದ್ದಾರೆ. ನಾವು ಶಾಲಾ-ಕಾಲೇಜಿಗೆ ಮೂಲಭೂತ ಸೌಕರ್ಯ ಕೊಟ್ಟಿ ತೋರಿಸಿದ್ದೇವೆ ಎಂದರು .
ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿದೆ ರಾಜ್ಯದಲ್ಲಿ ಯಾವುದಾದರೂ ರಸ್ತೆ ಗುಂಡಿ ಮುಚ್ಚಿದ್ದಾರೆಯೇ? ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ 1500 ಹೈಸ್ಕೂಲು, 240 ಪ್ರಥಮ ದರ್ಜೆ ಕಾಲೇಜು ತೆರಿಯಲಾಗಿತ್ತು , ಖಾಲಿ ಇದ್ದಂತಹ ನೂರಾರು ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದು ಅವರ ಅವಧಿಯಲ್ಲಿಯೇ ಎಂದರು .
50 ವರ್ಷ ಆಡಳಿತದಲ್ಲಿ ಇದ್ದಂತಹ ಕಾಂಗ್ರೆಸ್ ಸರ್ಕಾರ ಏನು ಮಾಡಲು ಹಾಗಿರಲಿಲ್ಲ ಕುಮಾರಸ್ವಾಮಿ ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ ಇಡೀ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ದೇವೇಗೌಡರು , ಕುಮಾರಸ್ವಾಮಿ, ನಮ್ಮ ಜೆಡಿಎಸ್ ಶಾಸಕರು ಎಂದರು .
ದೇವೇಗೌಡರ ಕುಟುಂಬ ಯಾವುದೇ ಖಾಸಗಿ ಶಾಲೆಯನ್ನು ತೆರೆದಿಲ್ಲ ಎಂದು ಹೇಳಿದ ಅವರು ಶಿಕ್ಷಕರ ಮಕ್ಕಳ 10% ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದರು.ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಈಗ 15ನೇ ಸ್ಥಾನದಲ್ಲಿದೆ ನಮ್ಮ ಸರ್ಕಾರ ಆಡಳಿತದ ಅವಧಿಯಲ್ಲಿ ಮೊದಲನೇ ಸ್ಥಾನದಲ್ಲಿತ್ತು . ಈ ರೀತಿ ಆಗಲು ಕಾರಣ ಯಾರು? ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು .
ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶವನ್ನು ಜನತೆಯ ಶಕ್ತಿಗೆ ಬಿಟ್ಟಿದ್ದೇನೆ, ಜನತೆಯ ತೀರ್ಪಿಗೆ ತಲೆಬಾಗುತ್ತೇನೆ . ನಾವು ಅಧಿಕಾರಕ್ಕೋಸ್ಕರ ಹೋರಾಟ ಮಾಡಲ್ಲ ಅಧಿಕಾರ ಇದ್ದರೂ ಕೆಲಸ ಮಾಡುತ್ತೇವೆ. ಅಧಿಕಾರ ಇಲ್ಲದಿದ್ದರೂ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಎರಡು ಪ್ರಕರಣ ದಾಖಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರೇವಣ್ಣ ಅವರು ಯಾರು ಆತಂಕ ಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತೆ. ಟೈಮ್ ಬೇಕು ಅಷ್ಟೇ ! ನಮ್ಮ ಜಿಲ್ಲೆಯ ಜನರನ್ನು 60 ವರ್ಷ ದೇವೇಗೌಡರು ಕಾಪಾಡಿದ್ದಾರೆ. ನಾನಿದ್ದೇನೆ ಎ. ಮಂಜು, ಸ್ವರೂಪ್ರಕಾಶ್ ಇದ್ದಾರೆ ಎಂದರು. ಯಾರು ಭಯಪಡುವ ಆತಂಕ ಪಡುವ ಅಗತ್ಯವಿಲ್ಲ ನನಗೂ ಜಿಲ್ಲೆಯ ಜನ 25 ವರ್ಷ ಆಶೀರ್ವಾದ ಮಾಡಿದ್ದಾರೆ.
48 ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣ ಬಾ ಎಂಬ ಕುಮಾರಸ್ವಾಮಿ ಮನವಿ ವಿಚಾರವಾಗಿ, ಕೋರ್ಟ್ ನಲ್ಲಿ ಕೇಸ್ ಇದ್ದಾಗ ನಾನು ಮಾತನಾಡಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಎ.ಮಂಜು ಅವರು ಅದರ ಬಗ್ಗೆ ಮಾತನಾಡಲು ಆಗಲ್ಲ ಎಂದರು.
ಶಾಸಕ ಸ್ವರೂಪ್ ಪ್ರಕಾಶ್ , ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ ಎಸ್ ಲಿಂಗೇಶ್ , ದಕ್ಷಿಣ ಶಿಕ್ಷರ ಕ್ಷೇತ್ರದ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ನಿರಂಜನ್ ಮೂರ್ತಿ , ಜೆಡಿಎಸ್ ಮುಖಂಡರಾದ ಬಿ ವಿ ಕರೀಗೌಡ , ರಾಜೇಗೌಡ , ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್ ದ್ಯಾವೇಗೌಡ , ಎಸ್ ಮಂಜೇಗೌಡ , ದೊಡ್ಡ ದಿಣ್ಣೆ ಸೋಮಶೇಖರ್ ಇದ್ದರು.