ಬೆಂಗಳೂರು,ಏ.29- ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದ್ದು, ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ತಿರುಗೇಟು ನೀಡಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕುಟುಂಬದ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದರು.
ಕಳೆದ 40 ವರ್ಷಗಳಿಂದಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಸಿಓಡಿ, ಲೋಕಾಯುಕ್ತ ಸೇರಿದಂತೆ ಹಲವು ತನಿಖೆಗಳು ನಡೆದಿವೆ.ತನಿಖೆಗಳನ್ನು ನಾವು ಎದುರಿಸಿದ್ದೇವೆ. ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದು ಮೊದಲೇ ನಿರ್ಧಾರವಾಗಿತ್ತು. ಅವರಿಗೆ ಎಸ್‌ಐಟಿಗೆ ವಹಿಸುವುದಾಗಲೀ, ಎಫ್‌ಐಆರ್ ದಾಖಲಿಸುವುದಾಗಲೀ ಗೊತ್ತಿರಲಿಲ್ಲ ಎಂದರು.
ರಾಜ್ಯಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಕಾನೂನು ರೀತಿ ತನಿಖೆ ಮಾಡಲಿ. ಎಸ್‌ಐಟಿಯವರು ಕರೆದರೆ ಪ್ರಜ್ವಲ್ ಹಾಜರಾಗುತ್ತಾರೆ ಎಂದು ತಿಳಿಸಿದರು.ನಾಲ್ಕೈದು ವರ್ಷದ ಹಿಂದಿನ ಕಥೆಯನ್ನು ತಂದು ಈಗ ದೂರು ನೀಡಲಾಗಿದೆ. ಇದೆಲ್ಲವೂ ರಾಜಕೀಯ ಪ್ರೇರಿತ. ತನಿಖೆ ನಡೆಯಲಿ ಎಂದರು.
ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ಈ ವಿಚಾರವನ್ನು ದೇವೇಗೌಡರ ಬಳಿ ತಾವು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.