ಬೆಂಗಳೂರು, ಏ.17– ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಸೋರಿಕೆ ಬಗ್ಗೆ ತಪ್ಪದೇ ತನಿಖೆ ಮಾಡಿಸಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಯೋಗದಿಂದ ಸೋರಿಕೆ ಆಯಿತಾ? ಅಥವಾ ಸಂಪುಟದಲ್ಲಿ ಸಚಿವರ ಕೈ ಸೇರಿದ ಮೇಲೆ ಸೋರಿಕೆ ಆಯಿತಾ? ಅಥವಾ ನಿಮ ಗ್ಯಾಂಗ್ ಕೈ ಚಳಕವಾ? ತನಿಖೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೀರಾ? ನೀವೇ ಹೇಳಬೇಕು ಎಂದು ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಮೀಕ್ಷಾ ವರದಿ ಸೋರಿಕೆಗೆ ನಿಮ ಸರ್ಕಾರವೇ ಹೊಣೆ, ಸಂಶಯವೇ ಇಲ್ಲ. ಯಾವುದೇ ಕಾರಣಕ್ಕೂ ಸೋರಿಕೆಯಾದ ಈ ವರದಿಯನ್ನು ಸಂಪುಟದಲ್ಲಿ ಮಂಡಿಸಲೇಬಾರದು. ಮಂಡಿಸಿ ಸಂಪುಟದ ಪಾವಿತ್ರ್ಯ ಹಾಳು ಮಾಡಬೇಡಿ ಎಂದು ಅವರು ಹೇಳಿದ್ದಾರೆ.
ನೆಮದಿಯಾಗಿದ್ದ ರಾಜ್ಯಕ್ಕೆ ಬೆಂಕಿ ಹಾಕಿದ್ದೀರಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದ್ದೀರಿ. ನಿಮ ದುರುದ್ದೇಶ, ದುಷ್ಟತನದ ಪರಾಕಾಷ್ಠೆ ಇದು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಟ್ಟ ಪಾಪ ಸುಮನೆ ಬಿಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೂ ಅನುಮಾನ ನಿಜವಾಯಿತು.ರಾಜ್ಯ ಮಾಡಿದ್ದು ಜಾತಿ ಗಣತಿ. ಮುಖ್ಯಮಂತ್ರಿ ಮಹೋದಯರ ಪ್ರಕಾರ ಅದು ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ.ಸಿದ್ದರಾಮಯ್ಯನವರು ಈಗ ಉಲ್ಟಾ ಹೊಡೆದಿದ್ದಾರೆ. ಅದು ಜಾತಿ ಸಮೀಕ್ಷೆ ಅಲ್ಲ. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಎಂದು ಹೊಸ ಪೀಪಿ ಊದುತ್ತಿದ್ದಾರೆ ಎಂದು ಹೆಚ್‌ಡಿಕೆ ವ್ಯಂಗ್ಯವಾಡಿದ್ದಾರೆ.
ಹಾಗಾದರೆ ಹಾದಿ ಬೀದಿಯಲ್ಲಿ ತೇಲಾಡುತ್ತಿರುವ, ಬಿದ್ದೂಬಿದ್ದೂ ಹೊರಳಾಡುತ್ತಿರುವ ಅಂಕಿ-ಸಂಖ್ಯೆಗಳು ಏನು? ಸೋರಿಕೆಯಾಗಿರುವ ದತ್ತಾಂಶ ಮತ್ತು ಸಿಎಂ ಅವರು ಹೇಳಿದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶವು ಎರಡೂ ಒಂದೇನಾ? ಅಥವಾ ಅಲ್ಲವಾ? ವರದಿ ಬಹಿರಂಗಕ್ಕೆ ಮೊದಲೇ ವ್ಯವಸ್ಥಿತವಾಗಿ ಸೋರಿಕೆ ಮಾಡಿದ್ದು ಯಾರು? ಅದರ ಹಿಂದಿರುವ ಕಳ್ಳ ಕೈ ಯಾವುದು? ಬೀದಿಪಾಲಾದ ದತ್ತಾಂಶ ಇಟ್ಟುಕೊಂಡು ಏನು ಮಾಡುತ್ತೀರಿ? ಎಂದು ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.