ಬೆಂಗಳೂರು,ಆ.8- ಮತದಾರರ ಗುರುತಿನ ಚೀಟಿ ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದರಿಂದ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮತಗಳ್ಳತನಕ್ಕೆ ಇದೊಂದೇ ಮದ್ದು ಎಂದಿದ್ದಾರೆ.ಕೇಂದ್ರ ಚುನಾವಣಾ ಆಯೋಗ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಒತ್ತಾಯ ಮಾಡಿರುವ ಅವರು, ಚುನಾವಣಾ ಆಯೋಗದ ಮೇಲೆ ಸುಳ್ಳಿನ ಸುರಿಮಳೆ ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ ಎಂದು ಆರೋಪಿಸಿದ್ದಾರೆ.
ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ ಪಡೆಯುವ ಕಿಡಿಗೇಡಿ ಪಿತೂರಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಎಸಗಿದ ಪಾಪವನ್ನು ಮುಳ್ಳಿನಿಂದ ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ ಎಂದು ಅವರು ಟೀಕಿಸಿದ್ದಾರೆ.