ಬೆಂಗಳೂರು, ಆ.2-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಹಗರಣದ ವಿರುದ್ಧ ಬಿಜೆಪಿ ನಾಳೆಯಿಂದ ಆರಂಭಿಸಲಿರುವ ಬೆಂಗಳೂರಿನಿಂದ ಮೈಸೂರುವರೆಗಿನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಜೆಡಿಎಸ್ ರಾಜ್ಯಾಧ್ಯಕ್ಷರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿರುವ ಕೆಂಪಮ ದೇವಸ್ಥಾನದಿಂದ ಮೈಸೂರು ನಗರದವರೆಗೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಜಂಟಿಯಾಗಿ ಪಾದಯಾತ್ರೆಯನ್ನು ಹಮಿಕೊಂಡಿವೆ.ಪಾದಯಾತ್ರೆ ವಿಚಾರದಲ್ಲಿ ನಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಮಾಜಿ ಶಾಸಕ ಪ್ರೀತಂಗೌಡ ಸಾರಥ್ಯದಲ್ಲಿ ನಡೆಯುವ ಪಾದಯಾತ್ರೆಗೆ ಬೆಂಬಲವಿಲ್ಲ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಅಸಮಾಧಾನದ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವೊಲಿಕೆ ಮಾಡಿದ್ದರು. ಮನವೊಲಿಕೆ ನಂತರ ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕುಮಾರಸ್ವಾಮಿ ತಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನಿರ್ದೇಶನ ನೀಡಿದ್ದಾರೆ.
ನಾಳೆಯಿಂದ ಪ್ರಾರಂಭವಾಗುವ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು, ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ವಿವಿಧ ವಿಭಾಗಗಳ ರಾಜ್ಯಾಧ್ಯಕ್ಷರು ಹಾಗೂ ತಮ ಬೆಂಬಲಿಗರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್, ಡಿ. ಕುಮಾರಸ್ವಾಮಿರವರ ಸೂಚನೆ ಮೇರೆಗೆ ಪಕ್ಷದ ಮುಖಂಡರಿಗೆ ಪಾಲ್ಗೊಳ್ಳಲು ಅವರು ಕರೆ ನೀಡಿದ್ದಾರೆ.ಬೆಂಗಳೂರು ಮಹಾನಗರ ಘಟಕದ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್‌ಗೌಡ ಅವರ ನೇತೃತ್ವದಲ್ಲಿ ಸಭೆ ಸೇರಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.