ನವದೆಹಲಿ,ಮೇ 23- ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದಾಕ್ಷಣ ಜನರಿಗೆ ಚಿನ್ನದ ತಗಡು ಕೊಡಿಸಲು ಸಾಧ್ಯವೇ ಎಂದು ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರ ಸ್ವಾಮಿ ಲೇವಡಿ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದ ಹೆಸರು ಬದಲಾವಣೆಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ರಾಮನಗರ ಹೆಸರಿಗೆ ಒಂದು ಇತಿಹಾಸವಿದೆ. ಅದನ್ನು ಬದಲಾವಣೆ ಮಾಡಿರುವುದಕ್ಕೆ ಹಿಂದುತ್ವ ವಿರೋಧಿಗಳ ಎಂದು ಹೇಳಲು ನಾನು ಬಯಸುವುದಿಲ್ಲ. ಹಣ ಲೂಟಿ ಹೊಡೆಯಲು ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಬೆಂಗಳೂರು ದಕ್ಷಿಣ ಜಿಲ್ಲೆಯ ಬದಲು ವಿಶ್ವವಿಖ್ಯಾತ ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹೆಸರನ್ನು ಅವರು ನಾಮಕರಣ ಮಾಡಬಹುದಿತ್ತು. ಈ ಹಿಂದೆ ಕೆಂಗಲ್ ಹನುಮಂತಯ್ಯನವರು ನೆಹರು ಅವರಿಗೆ ಸೆಡ್ಡು ಹೊಡೆದು ರಾಜಕಾರಣ ಮಾಡಿದ್ದರು. ಮೂರು ಜನ ಮುಖ್ಯಮಂತ್ರಿಗಳನ್ನು ಕೊಟ್ಟ ರಾಮನಗರ ಜಿಲ್ಲೆಯನ್ನು 2017 ರಲ್ಲಿ ಹೊಸದಾಗಿ ಘೋಷಿಸಿದಾಗ ಏಕೆ ವಿರೋಧ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಬುದ್ದಿವಂತರು. ಆ ಹೆಸರನ್ನು ಉಳಿಸಿಕೊಂಡಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಹೆಸರನ್ನು ಮುಂದುವರೆಸಿದ್ದೇ ನಾನು. ರಾಮನಗರ ಜಿಲ್ಲಾಕೇಂದ್ರ ಮಾಡಿದ್ದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಇವರ ಸರ್ಕಾರ ಶಾಶ್ವತವಾಗಿರುವುದಿಲ್ಲ. ಮುಂದಿನ ಚುನಾವಣೆಯ ಫಲಿತಾಂಶ ಏನು ಎಂದು ನನಗೆ ಗೊತ್ತಿದೆ. ಮತ್ತೆ ಹೆಸರು ಬದಲಾವಣೆಯಾಗುತ್ತದೆ ಎಂದು ಹೇಳಿದರು. ಪ್ರಮುಖವಾಗಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿರುವ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ.2006-07, 2007-08 ರಲ್ಲಿ ಜೆಡಿಎಸ್-ಬಿಜೆಪಿ ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಹಾಗೂ 2018 ರ ಬಳಿಕ 14 ತಿಂಗಳ ಕಾಲ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಾನು ಮಾಡಿದ್ದ ಕೆಲಸಗಳು ಸರ್ಕಾರದ ದಾಖಲೆಗಳಲ್ಲಿವೆ.
ರಾತ್ರಿ 1 ಗಂಟೆವರೆಗೂ ವ್ಯಾಪಾರ ಮಾಡಿ ಲೂಟಿ ಹೊಡೆಯುವುದರಲ್ಲೇ ಮಗ್ನರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಲ್ಪ ದಾಖಲೆಗಳನ್ನು ತೆಗೆದು ನೋಡಲಿ ಎಂದು ತಿರುಗೇಟು ನೀಡಿದ್ದಾರೆ. ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮತ್ತು ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ ಕುರಿತು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಸ್ತೆ ನಿರ್ಮಾಣಕ್ಕೆ ಆಡಳಿತಾತಕ ಮಂಜೂರಾತಿ ನೀಡಿದ್ದಾರೆ. ಹಣ ಎಲ್ಲಿದೆ ಎಂದು ಗೊತ್ತಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚರ್ಚಿಸಿ ತೀರ್ಮಾನ ಮಾಡುತ್ತಾರಂತೆ ಎಂದು ಲೇವಡಿ ಮಾಡಿದರು.
ಈ ಹಿಂದೆ ಬೆಂಗಳೂರಿನ ಮಿನ್ಸ್ ಸ್ಕ್ವೇರ್‌ನಿಂದ ಹೆಬ್ಬಾಳದವರೆಗೂ 30 ಕೋಟಿ ರೂ. ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಚರ್ಚೆ ನಡೆಸಿ ಕೊರಿಯನ್ ಕಂಪನಿಗೆ ಗುತ್ತಿಗೆ ನೀಡಲು ತಾವು ಮುಖ್ಯಮಂತ್ರಿಯಾಗಿದ್ದಾಗ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಸರ್ಕಾರ ಬದಲಾಗಿ ಅದು ನೆನೆಗುದ್ದಿಗೆ ಬಿದ್ದಿದೆ. ಬೆಂಗಳೂರಿನ 146 ಕಿ.ಮೀ. ರಾಜಕಾಲುವೆಗಳ ಮೇಲೆ ಎಲಿವೇಟೆಡ್ ರಸ್ತೆ ನಿರ್ಮಿಸಲು ಪ್ರಸ್ತಾವನೆ ಇತ್ತು. ಬದಲಾದ ರಾಜಕೀಯದಲ್ಲಿ ಎಲ್ಲಾ ಸರ್ಕಾರಗಳು ತಮ ಅವಧಿಯಲ್ಲಿನ ಯೋಜನೆಗಳನ್ನು ಕಸದ ಬುಟ್ಟಿಗೆ ಹಾಕಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಯಿ ಬಡಾವಣೆಯಲ್ಲಿ ನೀರು ನಿಲ್ಲಲು ಸರ್ಕಾರದ ಧೋರಣೆಯೇ ಕಾರಣ. ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಇದೇ ಪರಿಸ್ಥಿತಿ ಇತ್ತು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಳ ಪರಿಶೀಲನೆ ಮಾಡಿದ್ದರು. ತಾವು ಸ್ಥಳೀಯ ಶಾಸಕ ಭೈರತಿ ಬಸವರಾಜು ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದಾಗ ಬ್ಯಾಟರಾಯಪುರ, ದಾಸರಹಳ್ಳಿ ಸೇರಿ ಏಳೆಂಟು ಕ್ಷೇತ್ರಗಳಿಂದ ಮಳೆ ನೀರು ಹರಿದುಬಂದು ರೈಲ್ವೆ ಹಳಿಯ ಒಂದು ಬದಿಯಲ್ಲಿ ನಿಲ್ಲುತ್ತಿದೆ. ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಆ ನೀರನ್ನು ಮತ್ತೊಂದು ಬದಿಗೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ವಿಚಾರವಾಗಿ ಮುಖ್ಯಮಂತ್ರಿಯವರ ಬಳಿ ಚರ್ಚಿಸಿ ಯೋಜನೆಯನ್ನೂ ಆರಂಭಿಸಿದರು. ಆದರೆ ಈಗಿನ ಸರ್ಕಾರ ಗುತ್ತಿಗೆದಾರರಿಗೆ ಹಣ ನೀಡದೇ ಇದ್ದುದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ, ನೀರು ನಿಲ್ಲುತ್ತಿದೆ ಎಂದು ಆರೋಪಿಸಿದರು.ಮುಖ್ಯಮಂತ್ರಿಯವರು ಎಸಿ ಬಸ್‌ನಲ್ಲಿ ಕಾಟಾಚಾರದ ನಗರ ಪ್ರದಕ್ಷಿಣೆಯಂತಹ ರೋಡ್ ಶೋ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ ಎಂದರು.
ಔಟರ್ ಪೆರಿಫೆರಲ್ ರಿಂಗ್‌ರಸ್ತೆ ನಿರ್ಮಾಣಕ್ಕೆ 17 ವರ್ಷಗಳ ಹಿಂದೆ ಪ್ರಕ್ರಿಯೆ ಆರಂಭವಾಯಿತು. ಆಗಿನ ಕೇಂದ್ರ ರಸ್ತೆ ಸಾರಿಗೆ ಸಚಿವ ಬಾಲು ಹಣ ನೀಡಲು ಒಪ್ಪಿದ್ದರು. ಟೆಂಡರ್ ಕೂಡ ಆಗಿತ್ತು. ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ಬೆಂಗಳೂರಿಗೆ 25 ಸಾವಿರ ಕೋಟಿ ರೂ.ಗಳನ್ನು ತಂದಿದ್ದೆ. ನನ್ನ ಅವಧಿಯಲ್ಲಿ 56 ಕಿ.ಮೀ. ರಸ್ತೆ ಅಗಲೀಕರಣ ಆಗಿತ್ತು.
ಕೆ.ಆರ್.ಪುರಂನಿಂದ 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್‌ಗೆ ತೀರ್ಮಾನ ಕೈಗೊಂಡಾಗ ಆಗ ತಮ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ನನ್ನನ್ನು ಕೇಳದೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಬಾರದು ಎಂದು ಅಡ್ಡಿಪಡಿಸಿದರು ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಪದೇಪದೇ ಬೆಂಗಳೂರಿಗೆ ಕುಮಾರಸ್ವಾಮಿ ಕೊಡುಗೆಯೇನು? ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕುತ್ತಾರೆ. ಅವರೊಂದಿಗೆ ನಾನು ಏನು ಚರ್ಚೆ ಮಾಡಲು ಸಾಧ್ಯ. ದಾಖಲೆಗಳೇ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.