ಬೆಂಗಳೂರು, ಮಾ.29– ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಜನ್ಮದಿನವಾದ ಏ.14ರಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ರಜಾದಿನವಾಗಿ ಘೋಷಣೆ ಮಾಡಿರುವುದನ್ನು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ಅಂಬೇಡ್ಕರ್ ಅವರ ಜನ್ಮ ದಿನವಾದ ಏ.14ರಂದು ರಾಷ್ಟ್ರವ್ಯಾಪಿ ಕೇಂದ್ರ ಸರ್ಕಾರದ ಕಚೇರಿಗಳಿಗೆ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಿರುವುದು ಸಂತೋಷದ ಸಂಗತಿ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐತಿಹಾಸಿಕವಾಗಿ ಅನ್ಯಾಯಕ್ಕೆ ತುತ್ತಾಗಿದ್ದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅರ್ಹ ಗೌರವ, ಸಮ್ಮಾನ ಸಮರ್ಪಣೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಮನುಕುಲಕ್ಕೆ, ಚೈತನ್ಯಶೀಲ ಭಾರತಕ್ಕೆ ಅಂಬೇಡ್ಕರ್ ಅವರು ನೀಡಿರುವ ಕೊಡುಗೆ ಅಜರಾಮರ. ಪ್ರಧಾನಿಗಳ ಈ ನಿರ್ಧಾರ ಸ್ವಾಗತಾರ್ಹ. ಬಾಬಾ ಸಾಹೇಬ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ದೃಷ್ಟಿಕೋನವು ಭಾರತವನ್ನು ಸದಾ ಗಟ್ಟಿಗೊಳಿಸುತ್ತಲೇ ಇದೆ ಎಂದು ಅವರು ತಿಳಿಸಿದ್ದಾರೆ.