Sunday, March 16, 2025
Homeರಾಜಕೀಯ | Politicsವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ JDS ಶಾಸಕರಿಗೆ ಹೆಚ್‌ಡಿಕೆ ಸಲಹೆ

ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ JDS ಶಾಸಕರಿಗೆ ಹೆಚ್‌ಡಿಕೆ ಸಲಹೆ

HDK's advice to JDS MLAs in the wake of the legislative session

ಬೆಂಗಳೂರು, ಮಾ.3-ವಿಧಾನ ಮಂಡಲ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಜನಪರ ವಿಷಯಗಳ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡಿ. ಸರ್ಕಾರ ವೈಫಲ್ಯಗಳ ಬಗ್ಗೆ ಆದ್ಯತೆ ನೀಡಿ. ಈಗಾಗಲೇ ನಮ್ಮ ಮಿತ್ರಪಕ್ಷ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲಾಗಿದೆ. ಎರಡೂ ಪಕ್ಷಗಳ ಶಾಸಕರು ಉಭಯ ಸದನಗಳಲ್ಲಿ ಪರಸ್ಪರ ಒಮ್ಮತದಿಂದ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಸುಖಾಸುಮ್ಮನೆ ಕಲಾಪದಲ್ಲಿ ಮಾತನಾಡಬೇಡಿ. ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿ. ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಲಾಪದ ಸಮಯವನ್ನು ಸದುಪಯೋಗ ಮಾಡಿಕೊಂಡು ಜನರ ಪರವಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಕ್ಕಿಂತ ಅವುಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಂಡಿದ್ದೇ ಹೆಚ್ಚು.

ಮೂತ್ನಾಲ್ಕು ತಿಂಗಳು ಕಾಲ ಗೃಹಲಕ್ಷ್ಮೀ ಗ್ಯಾರಂಟಿ ಹಣವನ್ನು ಬಾಕಿ ಇಟ್ಟುಕೊಂಡು ಯಾವುದಾದರೂ ಚುನಾವಣೆ ಬಂದಾಗ ಒಮ್ಮೆಲೇ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಇದು ಸರ್ಕಾರ ಜನರಿಗೆ ಮಾಡುತ್ತಿರುವ ಮೋಸ.ಈ ವಿಷಯವನ್ನು ಕಲಾಪದಲ್ಲಿ ಪರಿಣಾಮಕಾರಿಯಾಗಿ ಚರ್ಚೆ ನಡೆಸಿ ಎಂದು ಅವರು ಶಾಸಕರಿಗೆ ಸೂಚನೆ ಕೊಟ್ಟಿದ್ದಾರೆ.

ಅಲ್ಲದೆ, ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂ. ಅನುದಾನ ಕೊಟ್ಟು ಕ್ರಿಯಾಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ, ಈವರೆಗೆ ಕ್ರಿಯಾಯೋಜನೆ ರೂಪಿಸುವ ಮಾತಿರಲಿ. ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಸರ್ಕಾರ ನಿರಂತರವಾಗಿ ಮೋಸ ಮಾಡುತ್ತಿದೆ. ಈ ಬಗ್ಗೆಯೂ ನೀವು ಹೋರಾಟ ಮಾಡಬೇಕಿದೆ ಎಂದು ಸಚಿವರು ಶಾಸಕರಿಗೆ ನಿರ್ದೇಶನ ನೀಡಿದ್ದಾರೆ.

ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ. ತೆರಿಗೆ ಎಷ್ಟು ವಸೂಲಿ ಮಾಡಿದ್ದೀರಿ? ಗ್ಯಾರಂಟಿಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ? ಉಳಿದ ಹಣ ಎಲ್ಲಿ ಹೋಗುತ್ತಿದೆ? ಎಂಬ ಬಗ್ಗೆ ಪ್ರಶ್ನೆ ಮಾಡಿ ಜನರ ತೆರಿಗೆ ಹಣ, ಯಾವ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬ ಮಾಹಿತಿ ಜನರಿಗೆ ಗೊತ್ತಾಗಬೇಕಿದೆ. ಅಬಕಾರಿ ಸುಂಕವನ್ನು ನಾಲ್ಕು ಬಾರಿ ಏರಿಕೆ ಮಾಡಿದ್ದಾರೆ. ಈ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಿ ಎಂದು ಅವರು ಶಾಸಕರಿಗೆ ಸಲಹೆ ಮಾಡಿದ್ದಾರೆ.

RELATED ARTICLES

Latest News