Sunday, June 30, 2024
Homeರಾಜಕೀಯಕುತೂಹಲ ಮೂಡಿಸಿದೆ ಬಂಧನ ಬಲೆಯಿಂದ ತಪ್ಪಿಸಿಕೊಂಡ ಬಿಎಸ್ವೈ ಮುಂದಿನ ನಡೆ

ಕುತೂಹಲ ಮೂಡಿಸಿದೆ ಬಂಧನ ಬಲೆಯಿಂದ ತಪ್ಪಿಸಿಕೊಂಡ ಬಿಎಸ್ವೈ ಮುಂದಿನ ನಡೆ

ಬೆಂಗಳೂರು,ಜೂ.15– ಸದ್ಯ ಬೀಸುವ ದೊಣ್ಣೆಯಿಂದ ಪಾರಾದಂತೆ ಕಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಬಿಎಸ್‌‍ವೈ ಅವರನ್ನು ಹೈಕೋರ್ಟ್‌ ಮುಂದಿನ ವಿಚಾರಣೆವರೆಗೂ ಬಂಧಿಸದಂತೆ ಸಿಐಡಿಗೆ ಸೂಚನೆ ನೀಡಿದೆ.

ನ್ಯಾಯಾಲಯದ ಆದೇಶದಿಂದ ನಿಟ್ಟುಸಿರು ಬಿಟ್ಟಿರುವ ಯಡಿಯೂರಪ್ಪ, ತಮ ವಿರುದ್ಧದ ರಾಜಕೀಯ ಪಿತೂರಿಯ ವಿರುದ್ಧ ಸಿಡಿದೇಳುತ್ತಾರಾ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

ನಾಲ್ಕು ದಶಕಗಳ ಅವರ ರಾಜಕೀಯ ನಡೆಯನ್ನು ಗಮನಿಸುತ್ತಾ ಬಂದಿರುವವರಿಗೆ ಯಡಿಯೂರಪ್ಪ ಸುಮನೆ ಕೂರುವ ವ್ಯಕ್ತಿಯಲ್ಲ ಎಂಬುದು ತಿಳಿದೇ ಇದೆ. ವಿಶೇಷ ಎಂದರೆ ಈ ಪ್ರಕರಣದಲ್ಲಿ ವಿರುದ್ಧ ಆರೋಪಗಳು ಕೇಳಿ ಬಂದಾಗ ಬಿಜೆಪಿಯ ರಾಜ್ಯ ನಾಯಕರು ಅವರ ಬೆಂಬಲಕ್ಕೆ ನಿಂತರೆ, ಲೋಕಸಭೆ ಚುನಾವಣೆಯಲ್ಲಿ ತಮ ಪುತ್ರನಿಗೆ ಬಿಜೆಪಿ ಟಿಕೆಟ್‌ ತಪ್ಪಿದ ಸಿಟ್ಟಿಗೆ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗೇ ಸಿಡಿದು ನಿಂತ ಮಾಜಿ ಸಚಿವ ಕೆ.ಎಸ್‌‍. ಈಶ್ವರಪ್ಪ ಕೂಡ ಬಿಎಸ್‌‍ವೈ ಪರವೇ ನಿಂತು ಸಮರ್ಥಿಸಿಕೊಂಡಿದ್ದರು. ರಾಜಕೀಯಕ್ಕೆ ಈ ಪ್ರಕರಣವನ್ನು ಬಳಸಿಕೊಳ್ಳುವ ಸಣ್ಣತನ ತೋರಿಸಲಿಲ್ಲ ಎಂಬುದು ಪ್ರಮುಖ ಅಂಶ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ನಡುವೆ ಸರ್ಕಾರದ ಆಡಳಿತ, ನೀತಿ ನಿರೂಪಣೆ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್‌‍ ಪಕ್ಷದ ನಿಲುವುಗಳಿಗೆ ಸಂಬಂಧಿಸಿದಂತೆ ಅನೇಕ ಸಂದರ್ಭದಲ್ಲಿ ತೀವ್ರ ಸ್ವರೂಪದ ವಾಕ್ಸಮರ ನಡೆದಿದೆ. ಆದರೆ ವೈಯಕ್ತಿಕ ಮಟ್ಟದಲ್ಲಿ ಅವರಿಬ್ಬರ ನಡುವೆ ಪಕ್ಷ ರಾಜಕಾರಣ ಮೀರಿದ ಸ್ನೇಹ, ಸಂಬಂಧ ಇದೆ.

ರಾಜಕಾರಣದ ವಿವಿಧ ಸಂದರ್ಭಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ನೆರವಾಗಿದ್ದೂ ಈಗ ಗುಟ್ಟೇನಲ್ಲ. ಇದು ಕಾಂಗ್ರೆಸ್‌‍ ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಗುಂಪಿಗೆ ಅಸಹನೆ ತಂದಿದೆ. ಇದು ಈ ಪ್ರಕರಣದಲ್ಲಿ ರಾಜಕೀಯ ಕೈವಾಡ ಇದೆಯೆ? ಎಂಬ ಸಂಶಯಗಳನ್ನು ಹುಟ್ಟುಹಾಕಿದೆ.

ಇಡೀ ಪ್ರಕರಣದ ಹಿಂದೆ ಬಿಜೆಪಿ ನಾಯಕರು ದೂಷಿಸುತ್ತಿರುವಂತೆ ರಾಜಕೀಯ ಪಿತೂರಿ ಇದೆಯಾ? ಇದ್ದರೆ ಅದು ಯಾರಿಗೆ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.ಒಂದು ವೇಳೆ ಈ ಪ್ರಕರಣದಲ್ಲಿ ಯಡಿಯೂರಪ್ಪನವರು ಬಂಧನಕ್ಕೀಡಾಗಿದ್ದರೆ ಬಿಜೆಪಿ ರಾಜ್ಯ ಮಟ್ಟದಲ್ಲಿ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿತ್ತು. ಆದರೆ ಸದ್ಯಕ್ಕೆ ಅಂಥದೊಂದು ಬಿಕ್ಕಟ್ಟಿನ ಸನ್ನಿವೇಶದಿಂದ ಪಕ್ಷವೂ ಪಾರಾಗಿದೆ.

ಇಡೀ ಪ್ರಕರಣ ಹೈಕೊರ್ಟ್‌ ಮುಂದಿರುವುದರಿಂದ ವಿಚಾರಣೆ ಆರಂಭವಾದ ನಂತರ ಅನೇಕ ಸತ್ಯ ಸಂಗತಿಗಳು ಹೊರ ಬರಬಹುದು. ಆದರೆ ಈ ಪ್ರಕರಣದಲ್ಲಿ ಲೋಕಸಭೆ ಚುನಾವಣೆಗೆ ಮೊದಲೇ ದೂರು ದಾಖಲಾದಾಗ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕಾದು ನೋಡುವ ನಿರ್ಧಾರಕ್ಕೆ ಬಂದಿತ್ತು. ಸ್ವಯಂ ಗೃಹಸಚಿವ ಡಾ. ಪರಮೇಶ್ವರ್‌ ಅವರ ಹೇಳಿಕೆಯೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಬಯಲುಗೊಳಿಸಿತ್ತು.

ಚುನಾವಣೆ ಸಂದರ್ಭದಲ್ಲಿ ದೂರು ಬಂದಾಗಲೇ ಸರ್ಕಾರ ಪ್ರಕರಣದ ತನಿಖೆಗೆ ಹಿಂಜರಿಯಲು ಯಡಿಯೂರಪ್ಪ ಪ್ರಭಾವಿ ರಾಜಕೀಯ ನಾಯಕ ಎಂಬುದು ಒಂದು ಕಾರಣವಾದರೆ ಮತ್ತೊಂದು ಬಿಜೆಪಿ ಈ ಪ್ರಕರಣವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳನ್ನೂ ಸರ್ಕಾರ ಗುರುತಿಸಿತ್ತು. ಈ ಕಾರಣಕ್ಕಾಗೇ ಕ್ರಮಕ್ಕೆ ಹಿಂದೇಟು ಹಾಕಿತ್ತು. ಆದರೆ ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ ಇದ್ದಕ್ಕಿದ್ದಂತೆ ಸರ್ಕಾರ ಚುರುಕಾಗಿದ್ದರ ಹಿಂದೆ ರಾಜಕೀಯ ಪ್ರಭಾವ ಇತ್ತು ಎಂಬ ಸಂಶಯಗಳು ಈಗ ತಲೆ ಎತ್ತಿದೆ.

ಹಾಗಿದ್ದಲ್ಲಿ ಅಂತಹ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದ ಪ್ರಭಾವೀ ನಾಯಕರು ಯಾರು? ಯಡಿಯೂರಪ್ಪ ಪ್ರಕರಣವನ್ನು ತಮ ಅನುಕೂಲಕ್ಕೆ ಬಳಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವ ಹುನ್ನಾರಗಳೂ ಇತ್ತು ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿವೆ.

ಸದ್ಯಕ್ಕಂತೂ ಯಡಿಯೂರಪ್ಪ ಬಂಧನದ ಭಿತಿಯಿಂದ ಪಾರಾಗಿದ್ದಾರೆ. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣವೂ ಇದೆ. ಬಿಜೆಪಿಯಲ್ಲಿ ಅವರು ಪ್ರಭಾವೀ ನಾಯಕರಾಗಿದ್ದರೂ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅವರ ಮಾತನ್ನು ಬಿಜೆಪಿ ವರಿಷ್ಠರು ಪೂರ್ಣವಾಗಿ ಪರಿಗಣಿಸಲಿಲ್ಲ.

ತುಮಕೂರು ಮತ್ತು ಚಿಕ್ಕ ಬಳ್ಳಾಪುರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಅವರ ಮಾತಿಗೆ ವರಿಷ್ಠರು ಮನ್ನಣೆ ನೀಡಲಿಲ್ಲ. ಫಲಿತಾಂಶದ ನಂತರವೂ ಪಕ್ಷದ ವೈಫಲ್ಯಗಳನ್ನು ಅವರ ತಲೆಗೇ ಕಟ್ಟುವ ಪ್ರಯತ್ನಗಳು ದೆಹಲಿ ಮಟ್ಟದಲ್ಲಿ ರಾಜ್ಯದ ಕೆಲವು ನಾಯಕರುಗಳಿಂದ ನಡೆದವು ಸಚಿವ ಸಂಪುಟ ರಚನೆ ವಿಚಾರದಲ್ಲೂ ಅವರ ವಿರೋಧಿ ವಿ. ಸೋಮಣ್ಣ ಅವರಿಗೆ ಮಣೆ ಹಾಕಲಾಯಿತು. ಅಸಮಾಧಾನ, ಅಪಮಾನಗಳಿಂದ ಯಡಿಯೂರಪ್ಪ ಕುದಿಯುತ್ತಿದ್ದಾರೆ.

RELATED ARTICLES

Latest News