ಬೆಂಗಳೂರು,ಡಿ.14- ಪತ್ನಿ ಹಾಗೂ ಮಾವನ ಕಿರುಕುಳದಿಂದ ಮನನೊಂದು ಹೆಡ್‌ಕಾನ್‌ಸ್ಟೇಬಲ್ ಒಬ್ಬರು ರೈಲಿಗೆ ತಲೆಕೊಟ್ಟು ಆತಹತ್ಯೆ ಮಾಡಿಕೊಂಡಿರುವ ಘಟನೆ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ತಿಪ್ಪಣ್ಣ (33 ) ಆತಹತ್ಯೆ ಮಾಡಿಕೊಂಡವರು. ಆತಹತ್ಯೆಗೂ ಮುನ್ನ ನನ್ನ ಸಾವಿಗೆ ಪತ್ನಿ ಹಾಗೂ ಮಾವ ಕಾರಣ ಎಂದು ಡೆತ್ನೋಟ್ ಬರೆದಿದ್ದಾರೆ.
ಬಿಜಾಪುರ ಮೂಲದ ತಿಪ್ಪಣ್ಣ ಅವರು ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಾಥ ಪುರದಲ್ಲಿ ವಾಸವಾಗಿದ್ದರು. ಮೂರು ವರ್ಷದ ಹಿಂದೆ ತಿಪ್ಪಣ್ಣ ಅವರು ಮದುವೆಯಾಗಿದ್ದರು, ಇತ್ತೀಚಿನ ದಿನಗಳಲ್ಲಿ ಪತ್ನಿ ಹಾಗೂ ಆಕೆಯ ತಂದೆಯ ಕಿರುಕುಳದಿಂದ ಮನನೊಂದಿದ್ದರು.
ಇವರಿಬ್ಬರ ವರ್ತನೆಯಿಂದ ಮಾನಸಿಕವಾಗಿ ತಿಪ್ಪಣ್ಣ ಅವರು ಬೇಸತ್ತಿದ್ದರು. ಮೊನ್ನೆ ಪತ್ನಿಯ ತಂದೆ ಯಮುನಪ್ಪ ಅವರು ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ತಿಪ್ಪಣ್ಣ ಅವರು ಮಾವನಿಗೆ ಕರೆ ಮಾಡಿದಾಗಲೂ ನೀನು ಸತ್ತು ಹೋಗು ಆಗ ನನ್ನ ಮಗಳು ಚೆನ್ನಾಗಿ ಇರುತ್ತಾಳೆ ಎಂದು ಬೈದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ನೊಂದು ತಿಪ್ಪಣ್ಣ ಅವರು ಡೆತ್ನೋಟ್ನಲ್ಲಿ ಈ ಎಲ್ಲಾ ವಿಚಾರಗಳನ್ನು ಬರೆದಿಟ್ಟು ತಡರಾತ್ರಿ 11.30ರ ಸುಮಾರಿಗೆ ಹುಸ್ಕೂರು ರೈಲ್ವೇ ಗೇಟ್ ಬಳಿ ಹೋಗಿ ರೈಲಿಗೆ ತಲೆ ಕೊಟ್ಟು ಆತಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಡೆತ್ನೋಟ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.