Friday, November 22, 2024
Homeರಾಜ್ಯರಾಜ್ಯದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಬೇಕು : ಸಂಸದ ಡಾ.ಮಂಜುನಾಥ್

ರಾಜ್ಯದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಬೇಕು : ಸಂಸದ ಡಾ.ಮಂಜುನಾಥ್

ಬೆಂಗಳೂರು,ಜು.6- ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸುವ ಮೂಲಕ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಹಿರಿಯ ಹೃದ್ರೋಗ ತಜ್ಞ ಹಾಗೂ ಸಂಸದ ಡಾ.ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಏಳೆಂಟು ಸಾವಿರ ಮಂದಿ ಡೆಂಘೀ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಳೆಂಟು ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಣೆ ಮಾಡಿ ಇದನ್ನು ನಿರ್ವಹಣೆ ಮಾಡಲು ವಿಶೇಷ ಕಾರ್ಯಪಡೆಯನ್ನು ರಚಿಸಬೇಕು. ವಿವಿಧ ಇಲಾಖೆಗಳು ಸಮನ್ವಯತೆಯಿಂದ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಡೆಂಘೀ ಸೋಂಕಿಗೆ ನಿಖರವಾದಂತಹ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜ್ವರ, ತಲೆನೋವು, ಸುಸ್ತುಗಳಿಗೆ ಆಯಾ ಪರಿಹಾರದ ಚಿಕಿತ್ಸೆ ನೀಡಲಾಗುತ್ತಿದೆಯೇ ಹೊರತು, ಡೆಂಘೀ ಸೋಂಕಿಗೆ ನಿಖರವಾದ ಚಿಕಿತ್ಸೆ ಇಲ್ಲ. ಹೀಗಾಗಿ ನಿಯಂತ್ರಣವೇ ಸೂಕ್ತ ಮಾರ್ಗ ಎಂದು ಹೇಳಿದರು.

ರಾಜ್ಯದಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರಸ್ತೆಗಳನ್ನು ಅಗೆದಿದ್ದಾರೆ. ಹಳ್ಳದಿಣ್ಣೆಗಳು ಹೆಚ್ಚಾಗಿವೆ. ನೀರು ನಿಂತು ಸೊಳ್ಳೆಗಳ ಉತ್ಪಾದನೆ ತೀವ್ರಗೊಳ್ಳುತ್ತಿವೆ. ಮೊದಲು ಸರ್ಕಾರ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವೈದ್ಯಕೀಯ ಶಿಕ್ಷಣ, ಕಂದಾಯ ಸೇರಿ ಹಲವು ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಯಬೇಕಿದೆ ಎಂದರು.

ಆರೋಗ್ಯ ತುರ್ತು ಪರಿಸ್ಥಿತಿಯಾಗಿರುವುದರಿಂದ ಡೆಂಘೀ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕೋವಿಡ್ ಸಂದರ್ಭದಲ್ಲಿ ಅನುಸರಿಸಿದಂತೆ ಗರಿಷ್ಠ ಚಿಕಿತ್ಸೆಯ ಮಿತಿಯನ್ನು ನಿಗದಿ ಮಾಡಿ ಡೆಂಘೀಗೂ ಉಚಿತವಾದ ಚಿಕಿತ್ಸೆ ನೀಡಬೇಕು. ಪ್ರತ್ಯೇಕವಾದ ವಾರ್ ರೂಂ ಅನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಸೊಳ್ಳೆಗಳ ಹಾವಳಿಯಿಂದ ಮಕ್ಕಳನ್ನು ರಕ್ಷಿಸಲು ಲಭ್ಯವಿರುವ ವ್ಯವಸ್ಥೆಗಳನ್ನು ಪಾಲಿಸಬೇಕು. ಶಾಲಾ-ಕಾಲೇಜುಗಳಲ್ಲಿ, ಮಕ್ಕಳಲ್ಲಿ ಜಾಗೃತಿ ಜಾಥಾ ಮೂಡಿಸಬೇಕು ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ತೊಂದರೆಗೀಡಾಗಿದ್ದರು. ಈಗ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳ ಪ್ರಮಾಣ ಇದೆ. ಹೀಗಾಗಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ಪರಿಸ್ಥಿತಿ ನಿಭಾಯಿಸಲು ಸಾಧ್ಯ. ಕೆಲವು ದೇಶಗಳಲ್ಲಿ ಡೆಂಘೀ ನಿಯಂತ್ರಣಕ್ಕೆ ಲಸಿಕೆ ನೀಡಲಾಗುತ್ತಿದೆ. ಜೂನ್-ಜುಲೈನಲ್ಲಿ ಇದನ್ನು ನೀಡಿದರೆ ಸಾವಿನ ಸಾಧ್ಯತೆ, ತೀವ್ರ ನಿಗಾ ಘಟಕದ ಅವಶ್ಯಕತೆ ತಗ್ಗಲಿದೆ ಎಂದು ಹೇಳಿದರು.

ಸ್ಪಷ್ಟನೆ :
ಮುಂದಿನ ಉಪಚುನಾವಣೆಯಲ್ಲಿ ನನ್ನ ಪತ್ನಿ ಅನುಸೂಯ ಅವರು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕೆಲವು ಮಾಧ್ಯಮಗಳಲ್ಲಿ ಅನುಸೂಯ ಅವರು ಸ್ಪರ್ಧಿಸುತ್ತಾರೆಂಬ ಸುದ್ದಿ ಬಂದಿದ್ದು, ನಮಗೆ ಮುಜುಗರ ತಂದಿದೆ ಅವರು ಹೇಳಿದರು.

RELATED ARTICLES

Latest News