ನವದೆಹಲಿ,ಜೂ.20- ಉತ್ತರ ಮತ್ತು ಪೂರ್ವ ಭಾರತ ಈ ಬಾರಿ ಹಿಂದೆಂದೂ ಕಂಡರಿಯದಷ್ಟು ಉಷ್ಣ ಹವೆಗೆ ಸಾಕ್ಷಿಯಾಗಿದೆ. ಶಾಖದ ಹೊಡೆತದಿಂದ ಜನರ ಸಾವುನೋವುಗಳು ಹೆಚ್ಚಾಗುತ್ತಿವೆ. ಬಿಸಿಲಿನ ತಾಪದಿಂದ ಸಂಕಷ್ಟಕ್ಕೆ ಒಳಗಾಗಿರುವವರ ನೆರವಿಗೆ ಕೇಂದ್ರ ಸರ್ಕಾರ ಬಂದಿದೆ. ರೋಗಿಗಳ ರಕ್ಷಣೆ ಹಾಗೂ ನೆರವಿಗೆ ಧಾವಿಸುವಂತೆ ಹಾಗೂ ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರದ ಒಡೆತನದ ಎಲ್ಲ ಆಸ್ಪತ್ರೆಗಳಿಗೆ ಸಲಹೆ ಹಾಗೂ ಸೂಚನೆ ನೀಡಿದೆ.
ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 43 ರಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಲ್ಲಿ ಹೀಟ್ ಸ್ಟ್ರೋಕ್ ಮತ್ತು ಶಾಖದ ಬಳಲಿಕೆಯಿಂದ ಹಲವಾರು ಸಾವುಗಳು ಸಂಭವಿಸಿವೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ವರದಿಗಳು ಹೇಳುತ್ತಿವೆ.
ದೆಹಲಿಯಲ್ಲಿ ತಾಪಮಾನ ಹೆಚ್ಚುತ್ತಿರುವ ಪರಿಣಾಮ ಈಗ ಮೃತ ದೇಹಗಳು ಪತ್ತೆಯಾಗಲು ಆರಂಭವಾಗಿವೆ. ಬಿಸಿಲಿನ ತಾಪ ಇದೀಗ ಮಾರಕವಾಗಿ ಪರಿಣಮಿಸಿದೆ. ಇದು ಪ್ರತಿದಿನ ಜನರ ಪ್ರಾಣ ತೆಗೆಯುತ್ತಿದೆ. ದೆಹಲಿಯಲ್ಲಿ ತೀವ್ರ ಬಿಸಿಲಿನ ತಾಪ ಮತ್ತು ಶಾಖದ ಅಲೆಯಿಂದ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ 48 ಗಂಟೆಗಳಲ್ಲಿ 50 ಮೃತದೇಹಗಳು ಪತ್ತೆಯಾಗಿರುವುದರಿಂದ ದೆಹಲಿಯಲ್ಲಿ ಸಂಚಲನ ಉಂಟಾಗಿದೆ.
9 ದಿನಗಳಲ್ಲಿ 192 ನಿರಾಶ್ರಿತರು ಬಿಸಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, 48 ಗಂಟೆಗಳ ಅವಧಿಯಲ್ಲಿ ದೆಹಲಿಯ ವಿವಿಧ ಭಾಗಗಳಿಂದ ಅವಕಾಶ ವಂಚಿತ ಸಾಮಾಜಿಕ-ಆರ್ಥಿಕ ಹಿನ್ನೆಲೆಗೆ ಸೇರಿದ 50 ಜನರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೆಲ್ಲವೂ ವಿಪರೀತ ಶಾಖದಿಂದಾಗಿ ಉಂಟಾಗಿದೆ.
ಕಳೆದ 48 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ 50 ಶವಗಳು ಪತ್ತೆಯಾಗಿವೆ. ಆದರೆ ಸಾವಿನ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ದೆಹಲಿಯಲ್ಲಿ ಗರಿಷ್ಠ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಅಧಿಕವಾಗಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನವು 35.2 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು 1969 ರಿಂದ ಜೂನ್‌ನಲ್ಲಿ ದಾಖಲಾಗಿದ್ದ ತಾಪಮಾನಕ್ಕಿಂತ ಅತಿ ಹೆಚ್ಚು ಎಂದು ತಿಳಿದು ಬಂದಿದೆ.
ಎಲ್ಲೆಲ್ಲಿ ಎಷ್ಟು ಸಾವು:
ಆರ್‌ಎಂಎಲ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ 22 ರೋಗಿಗಳು ದಾಖಲಾಗಿದ್ದಾರೆ. ಐದು ಸಾವುಗಳು ಸಂಭವಿಸಿವೆ ಮತ್ತು 12 ರೋಗಿಗಳು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ದರ್‌ಜಂಗ್ ಆಸ್ಪತ್ರೆಯಲ್ಲಿ ದಾಖಲಾಗಿರುವ 42 ರೋಗಿಗಳು ಸೇರಿದಂತೆ ಒಟ್ಟು 60 ಹೀಟ್‌್ಸ ಸ್ಟ್ರೋಕ್ ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಮೃತಪಟ್ಟ 60 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ ಸೇರಿದಂತೆ ಆರು ಸಾವುನೋವುಗಳು ಈ ಆಸ್ಪತ್ರೆಯಿಂದ ವರದಿಯಾಗಿವೆ. ಇನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ ಶಂಕಿತ ಹೀಟ್‌ವೇವ್‌ನಿಂದ ನಾಲ್ಕು ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮೂಲಗಳು ತಿಳಿಸಿವೆ.
ಎಚ್ಚೆತ್ತ ಕೇಂದ್ರ, ಪರಿಸ್ಥಿತಿಯ ಪರಿಶೀಲನೆ :
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಸಿಗಾಳಿಯಿಂದಾಗಿ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಬಿಸಿಗಾಳಿಯಿಂದ ಉಂಟಾಗಿರುವ ಪರಿಸ್ಥಿತಿ ಮತ್ತು ಸನ್ನದ್ಧತೆಯ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ಸರಕಾರದಿಂದ ಚಾಲನೆಯಲ್ಲಿರುವ ಆಸ್ಪತ್ರೆಗಳಲ್ಲಿ ವಿಶೇಷ ಘಟಕಗಳನ್ನು ಆರಂಭಿಸುವಂತೆ ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಆರೋಗ್ಯ ಸೌಲಭ್ಯದ ಸನ್ನದ್ಧತೆಗೆ ನಿರ್ದೇಶನಗಳನ್ನು ನೀಡಿದೆ. ಉತ್ತರ ಭಾರತ ಹಾಗೂ ಇತರ ರಾಜ್ಯಗಳಿಗೂ ಕೇಂದ್ರ ಸೂಚನೆ ನೀಡಿದ್ದು, ಬಿಸಿಗಾಳಿಯಿಂದ ಉಂಟಾಗಿರುವ ಪರಿಣಾಮಗಳನ್ನು ಎದುರಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇನ್ನು ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ರಾಷ್ಟ್ರೀಯ ಕಾರ್ಯಕ್ರಮದ ಅಡಿ ರಾಜ್ಯ ನೋಡಲ್ ಅಧಿಕಾರಿಗಳು, ಮಾರ್ಚ್ 1 ರಿಂದ ಶಾಖದ ಅಲೆಗಳಿಂದ ಉಂಟಾಗಿರುವ ಸಾವು ನೋವುಗಳ ಅಂಕಿ- ಅಂಶಗಳನ್ನು ನೀಡುವಂತೆ ಸೂಚನೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಲ್ಲಿ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹೇಳಿದೆ. ಈ ಮೂಲಕ ಈಗ ಉಂಟಾಗಿರುವ ಹೀಟ್ ವೇವ್ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್ 12 ಮತ್ತು 18 ರ ನಡುವೆ ಮಾನ್ಸೂನ್‌ನಲ್ಲಿ ಯಾವುದೇ ಮಹತ್ವದ ಪ್ರಗತಿ ಸಾಧಿತವಾಗಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಉತ್ತಮ ಮಾನ್ಸೂನ್ ಮಳೆ ಆಗಲಿದೆ ಎಂದು ಇಲಾಖೆ ಹೇಳಿದೆ.
ಹೀಗಾಗಿ ಬಿಸಿಲಿನ ಶಾಖದಿಂದ ತತ್ತರಿಸುತ್ತಿರುವ ಉತ್ತರ ಭಾರತದಲ್ಲಿ ಮಳೆಗಾಗಿ ಎದುರು ನೋಡುವಂತಾಗಿದೆ. ಆದರೆ, ಹವಾಮಾನ ಇಲಾಖೆ ಅಂದಾಜಿಸಿದಂತೆ ಮುಂಗಾರು ಮಳೆ ಆಗುತ್ತಿಲ್ಲ ಎಂಬ ವಿಚಾರ ಹೊರ ಬಿದ್ದಿದೆ. ಇದು ಇಲ್ಲಿನ ಜನರನ್ನು ಇನ್ನಷ್ಟು ಕಂಗಾಲಾಗುವಂತೆ ಮಾಡಿದೆ. ಆದರೂ, ಉತ್ತಮ ಮಳೆಯ ಮುನ್ಸೂಚನೆಯನ್ನು ಐಎಂಡಿ ನೀಡಿದೆ.