Friday, March 21, 2025
Homeರಾಜ್ಯವಿಧಾನಪರಿಷತ್ತಿನಲ್ಲಿ ಅಂಬೇಡ್ಕರ್ ಅವರ ವಿಚಾರವಾಗಿ ಆಡಳಿತ-ಪ್ರತಿಪಕ್ಷಗಳ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ

ವಿಧಾನಪರಿಷತ್ತಿನಲ್ಲಿ ಅಂಬೇಡ್ಕರ್ ಅವರ ವಿಚಾರವಾಗಿ ಆಡಳಿತ-ಪ್ರತಿಪಕ್ಷಗಳ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ

heated argument between the ruling party and the opposition over Ambedkar

ಬೆಂಗಳೂರು, ಮಾ.21 – ಸಂವಿಧಾನ ಮತ್ತು ಬಿ.ಆರ್.ಅಂಬೇಡ್ಕರ್ ಅವರ ವಿಚಾರದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾದ ವಾಗ್ವಾದ, ಆರೋಪ-ಪ್ರತ್ಯಾರೋಪಗಳಿಂದಾಗಿ ಇಡೀ ಸದನ ಗೊಂದಲದ ಗೂಡಾಗಿ ಕೋಲಾಹಲದ ವಾತಾವರಣ ನಿರ್ಮಾಣವಾಗಿದ್ದರಿಂದ ತೀವ್ರ ಅಸಮಾಧಾನಗೊಂಡ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ವಿಧಾನ ಪರಿಷತ್ತಿನಲ್ಲಿ ಜರುಗಿತು.

ಆರೋಪ ಪ್ರತ್ಯಾರೋಪ ತಾರಕಕ್ಕೇರಿದ ಸಂದರ್ಭದಲ್ಲೇ ಆಡಳಿತ ಪಕ್ಷದ ಸದಸ್ಯರೊಬ್ಬರು ಆಡಿದ ಮಾತಿನಿಂದ ಕೆರಳಿ ಕೆಂಡವಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿ ಸಂಬಂಧಿಸಿದ ಸದಸ್ಯರನ್ನು ಸದನದಿಂದ ಹೊರಹಾಕಬೇಕು ಎಂದು ಪಟ್ಟು ಹಿಡಿದು ಆಗ್ರಹಿಸಿದರು.

2025-26ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆಯಲ್ಲಿ ಭಾಗವಹಿಸಿದ್ದ ಆಡಳಿತ ಪಕ್ಷ ಸುಧಾಮ್‌ಾಸ್ ಅವರು ಕೇಂದ್ರ ಸರ್ಕಾರದಿಂದ ಎಸ್ ಸಿ, ಎಸ್‌ಟಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಯೋಜನ ಆಯೋಗವಿದ್ದಾಗ ಈ ಸಮುದಾಯಗಳ ಅಭಿವೃದ್ಧಿಗೆ ಇಂತಿಷ್ಟು ಮೀಸಲಿಡಬೇಕು ಎಂದು ಮಾಡಿದ್ದ ಸಲಹೆಗಳನ್ನು ಕೇಂದ್ರ ಸರ್ಕಾರ ಪಾಲಿಸಲೇಬೇಕಾದ ಪರಿಸ್ಥಿತಿ ಇತ್ತು. ಆದರೆ, ಕೇಂದ್ರ ಸರ್ಕಾರ ಯೋಜನ ಆಯೋಗದ ಹೆಸರನ್ನು ನೀತಿ ಆಯೋಗವೆಂದು ಮಾರ್ಪಾಡು ಮಾಡಿದ ನಂತರ ಅದರ ಕಾರ್ಯವೈಖರಿ ಬದಲಾಗಿದೆ. ಪರಿಶಿಸ್ಟ ಸಮುದಾಯಗಳ ಏಳಿಗೆ ವಿಚಾರದಲ್ಲಿ ಆಯೋಗ ಮಾಡುವ ಸಲಹೆಗಳು ಕಡ್ಡಾಯವಾಗಿರುವುದಿಲ್ಲ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲಕ್ಕೆ ಕಾರಣವಾಯಿತು.

ಚರ್ಚೆ ಅಂಬೇಡ್ಕರ್ ಮತ್ತು ಸಂವಿಧಾನದತ್ತ ತಿರುಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ವಾಗ್ಯುದ್ದಕ್ಕೆ ನಿಂತು ನೀವು ಅಂಬೇಡ್ಕ‌ರ್ರಿಗೆ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿದ್ದೀರಿ ಎಂದು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡಿದರು. ಇದೇ ರೀತಿಯ ಟೀಕೆ – ಟಿಪ್ಪಣಿ ಸುಮಾರು ಅರ್ಧ ಗಂಟೆ ಕಾಲ ನಡೆಯಿತು.

ಒಂದು ಹಂತದಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಸಂವಿಧಾನಕ್ಕೆ ಅಪಚಾರ ಮತ್ತು ಅಂಬೇಡ್ಕರ್ ಅವರಿಗೆ ದ್ರೋಹ ಬಗೆದದ್ದು ಕಾಂಗ್ರೆಸ್ ಎಂದು ಆರೋಪಿಸಿದಾಗ, ಆಡಳಿತ ಪಕ್ಷದ ಸದಸ್ಯರೆಲ್ಲರೂ ತಿರುಗಿ ಬಿದ್ದರು.

ಭಲವಾದಿ ನಾರಾಯಣಸ್ವಾಮಿ ಅವರ ಬೆಂಬಲಕ್ಕೆ ಬಿಜೆಪಿ ಸದಸ್ಯರಾದ ರವಿಕುಮಾರ್,ಡಿ.ಎಸ್.ಅರುಣ್, ನವೀನ್ ಮತ್ತಿರರು ನಿಂತರು. ಸಭಾನಾಯಕ ಎನ್.ಎಸ್.ಬೋಸರಾಜ್, ಸಚಿವ ಪ್ರಿಯಾಂಕ್ ಖರ್ಗೆ, ಆಡಳಿತ ಪಕ್ಷದ ಸದಸ್ಯರಾದ ಪುಟ್ಟಣ್ಣ, ಡಾ.ಯತೀಂದ್ರ, ಬಿ.ಕೆ.ಹರಿಪ್ರಸಾದ್, ಎಂ.ನಾಗರಾಜ್ ಮೊದಲಾದವರು ಬಿಜೆಪಿ ಸದಸ್ಯರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಿರಿದ ದನಿಯಲ್ಲಿ ಟೀಕಾಪ್ರಹಾರ ಮಾಡಿದರು.
ಆದರಿಂದ ಸದನಲ್ಲಿ ಗದ್ದಲ, ಗೊಂದಲ, ಕೋಲಾಹ ವಾತಾವರಣ ಉಂಟಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳಿಸಲಿಲ್ಲ, ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಭಾಪತಿಯವರು, ಮೌನಕ್ಕೆ ಶರಣಾದರು. ಅಲ್ಲದೆ, ಗದ್ದಲದಲ್ಲಿ ಆಡುವ ಸದಸ್ಯರ ಮಾತುಗಳು ಕಡತಕ್ಕೆ ಹೋಗಬಾರದು ಎಂದು ಸೂಚಿಸಿದರು.

ಈ ನಡುವೆ ಆಡಳಿತ ಪಕ್ಷದ ಎಂ.ನಾಗರಾಜ್ ಸಭಾಪತಿ ಪೀಠದ ಮುಂದಿನ ಬಾವಿಗೆ ಬಂದು ಮಾತನಾಡಿದಕ್ಕೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿ ಸರ್ಕಾರವೇ ಬಾವಿಗೆ ಬಂದಿದೆ ಎಂದು ಛೇಡಿಸಿದರು.

ಜೆಡಿಎಸ್ ನಾಯಕ ಎಸ್.ಎಲ್.ಬೋಜೇಗೌಡ ಅವರು ಸದನ ಸುಸ್ಥಿತಿಯಲ್ಲಿ ಎಂದು ಆಕ್ಷೇಪ ಎತ್ತಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರು ಎದ್ದು ನಿಂತು ಆರೋಪ ಪ್ರತ್ಯಾರೋಪದಲ್ಲೇ ಮುಳುಗಿ ಪರಸ್ಪರ ಘೋಷಣೆ ಕೂಗಿದರು.

ಸದಸ್ಯರು ತಾವಾಗಿಯೇ ವಾತಾವರಣ ತಿಳಿಗೊಳಿಸಿದಾಗ ಮಧ್ಯೆ ಪ್ರವೇಶಿಸಿದ ಸಭಾಪತಿ ವಿರೋಧ ಪಕ್ಷದ ನಾಯಕರು ಮನಬಂದಂತೆ ಮಾತನಾಡುವಂತಿಲ್ಲ ಎಂದು ಹೇಳುತ್ತಿದ್ದಂತೆ ನಾರಾಯಣಸ್ವಾಮಿ ಅವರು ಸಮಜಾಯಿ ನೀಡಲು ಮುಂದಾಗಿದ್ದು, ಸಭಾವತಿ ಅವರನ್ನು ಕೆರಳಿಸಿತು.

ಮತ್ತೆ ಸಭಾಪತಿ ಅವರು, ಸಭಾನಾಯಕರತ್ತ ತಿರುಗಿ ಸಭಾನಾಯಕರೇ ಸಚಿವರು ಸೇರಿದಂತೆ ನಿಮ್ಮ ಕಡೆಯ ಸದಸ್ಯರನ್ನು ನಿಯಂತ್ರಿಸಬೇಕು. ಅದೇ ರೀತಿ ವಿರೋಧ ಪಕ್ಷದ ನಾಯಕರು ತಮ್ಮ ಕಡೆಯ ಸದಸ್ಯರನ್ನು ನಿಯಂತ್ರಿಸಬೇಕು. ನನಗೂ ಸಹನೆ ಇರುತ್ತದೆ. ಹೀಗೆ ಮುಂದುವರೆದರೆ ಸದನ ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಧಾಮ್ ದಾಸ್ ಅವರಿಗೆ ಮಾತನಾಡಲು ಮತ್ತೊಮ್ಮೆ ಅವಕಾಶ ನೀಡಿದರೂ ಮಾತನಾಡಲು ಆಗಲಿಲ್ಲ.ಪ್ರಿಯಾಂಕ ಖರ್ಗೆ ಅವರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ. ಒಂದು ಹಂತದಲ್ಲಿ ಪ್ರಯಾಂಕ ಖರ್ಗೆ ಅವರು ನೀಡಿದರೆನ್ನಲಾದ ಅಂಬೇಡ್ಕರ್ ಬರೆದಿರುವ ಪತ್ರವನ್ನು ವಾಚಿಸಿದರು. ಬಿಜೆಪಿಯ ಸದಸ್ಯ ಸಿ.ಟಿ.ರವಿ ಮತ್ತೊಂದು ಪತ್ರವನ್ನು ಪ್ರದರ್ಶಿಸಿ ವಾಚಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಗದ್ದಲ ಮುಂದುವರೆದಿರುವಾಗಲೇ ಆಡಳಿತ ಪಕ್ಷದ ಪುಟ್ಟಣ ಅವರು ಆಡಿದ ಆಕ್ಷೇಪಾರ್ಹ ಮಾತು ಛಲವಾದಿ ನಾರಾಯಣಸ್ವಾಮಿ ಅವರನ್ನು ಕೆರಳಿಸಿತು. ಪುಟ್ಟಣ್ಣ ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿ ಬಾವಿಗಿಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರೊಂದಿಗೆ ಧರಣಿ ನಡೆಸಿದರು. ಆಗ ಸಭಾಪತಿ ಕಡೆತ ತರಿಸಿ ಪುಟ್ಟಣ್ಣ ಅವರು ಹೇಳಿರುವ ಮಾತನ್ನು ಕಡತದಿಂದ ತೆಗೆಸಿರುವುದಾಗಿ ಪ್ರಕಟಿಸಿದರು. ಅದಕ್ಕೂ ಒಪ್ಪದೇ ಪ್ರತಿಪಕ್ಷಗಳು ಧರಣಿ ಮುಂದುವರೆಸಿದವು. ಈ ಸಂದರ್ಭದಲ್ಲಿ ಪುಟ್ಟಣ್ಣ ಮಾತನಾಡಿ ನಾನು ಆಸಂಸದೀಯ ಶಬ್ದ ಶಬ್ದ ಬಳಸಿಲ್ಲ. ಅಂತಹ ಜಾಯಮಾನ ನನ್ನದಲ್ಲ ಎಂದು ಸ್ಪಷ್ಟನೆ ನೀಡಿದರು.

ಉಷ್ಟಾದರೂ ಸದನದಲ್ಲಿ ಪ್ರತಪಕ್ಷಗಳು ಘೋಷಣೆ ಕೂಗುತ್ತಾ ಪಟ್ಟು ಧರಣಿ ಮುಂದುವರೆಸಿದರೆ, ಆಡಳಿತ ಪಕ್ಷದ ಸದಸ್ಯರು ಮಾತನಾಡಲು ಮುಂದಾಗುತ್ತಿದ್ದರು. ಇದರಿಂದ ಸದನ ಗೊಂದಲದ ಗೂಡಾದ್ದರಿಂದ ಸಭಾಪತಿ ಸದನದ ಕಾರ್ಯಕಲಾಪವನ್ನು ಕೆಲಕಾಲ ಮುಂದೂಡಿದರು.

RELATED ARTICLES

Latest News