ಬೆಂಗಳೂರು, ಏ.13 – ವಿಧಾನಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನದ ಸದಸ್ಯರ ನೇಮಕಾತಿಗೆ ಭಾರೀ ಪೈಪೋಟ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರ ನಡುವೆ ಪೈಪೋಟಿ ಏರ್ಪಟ್ಟಿದೆ.
ಇತ್ತೀಚೆಗೆ ದೆಹಲಿ ಹಾಗೂ ಗುಜರಾತ್‌ನಲ್ಲಿ ನಡೆದ ಪ್ರತ್ಯೇಕ ಸಭೆಗಳಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಸಲ್ಲಿಸಿದ್ದಾರೆ. ಇಬ್ಬರೂ ತಲಾ 10 ಮಂದಿ ಸದಸ್ಯರ ಪಟ್ಟಿಯನ್ನು ಸಲ್ಲಿಸಿದ್ದು, ತಮ್ಮ ಬೆಂಬಲಿಗರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಒಕ್ಕಲಿಗ ಸಮುದಾಯ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿಗೆ ತಲಾ ಒಂದು ಸ್ಥಾನಗಳನ್ನು ನೀಡಲು ಈ ಬಾರಿ ನಿರ್ಧರಿಸಲಾಗಿದೆ.
ಒಕ್ಕಲಿಗ ಸಮುದಾಯದಿಂದ ಬಿ.ಎಲ್.ಶಂಕರ್ ಅವರ ಹೆಸರು ಬಹುತೇಕ ಖಚಿತವಾಗಿತ್ತು. ಆದರೆ ಅದಕ್ಕೆ ಅಲ್ಪಸಂಖ್ಯಾತ ಸಮುದಾಯದ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿ.ಎಲ್.ಶಂಕರ್ ಆರ್ಎಸ್ಎಸ್ ಜೊತೆ ಗುರುತಿಸಿಕೊಂಡಿದ್ದು, ಅವರ ನೇಮಕಾತಿ ಮಾಡಿದರೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ತಗ್ಗುವಂತಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಲಾಗಿದೆ. ಹೀಗಾಗಿ ರಘುನಂದನ್ ರಾಮಣ್ಣ ಅವರ ಹೆಸರು ಪರ್ಯಾಯವಾಗಿ ಚರ್ಚೆಗೆ ಬಂದಿದೆ.
ರಮೇಶ್‌ಬಾಬು, ಮಾಲತಿ ಕೃಷ್ಣಮೂರ್ತಿ ಮತ್ತಿತರರ ಹೆಸರುಗಳು ಚರ್ಚೆಯಲ್ಲಿವೆ. ಈ ಹಿಂದೆ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಮೈಸೂರಿನ ಪತ್ರಕರ್ತ ಶಿವಕುಮಾರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ದಲಿತ ಸಂಘರ್ಷ ಸಮಿತಿಯ ಡಿ.ಜಿ.ಸಾಗರ್ ಸೇರಿದಂತೆ ಹಲವರ ಹೆಸರುಗಳು ಚರ್ಚೆಯಲ್ಲಿದೆ.
ಅಲ್ಪಸಂಖ್ಯಾತರ ಸಮುದಾಯದಿಂದ ಆಘಾ ಸುಲ್ತಾನ್ ಸೇರಿದಂತೆ ಇನ್ನೂ ಹಲವರ ಹೆಸರು ಚರ್ಚೆಯಲ್ಲಿವೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸಲ್ಲಿಸಿರುವ ಪಟ್ಟಿಯನ್ನು ಪರಿಶೀಲಿಸಿ ಹೈಕಮಾಂಡ್ ಶೀಘ್ರವೇ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಕ್ಕೆ ರವಾನೆ ಮಾಡುವ ಸಾಧ್ಯತೆಯಿದೆ.
ಮತ್ತಷ್ಟು ಮಂದಿ ಕೂಡ ವಿಧಾನಪರಿಷತ್ ನೇಮಕಗೊಳ್ಳಲು ತರಹೇವಾರಿ ಲಾಬಿ ಮಾಡುತ್ತಿದ್ದಾರೆ.