Tuesday, August 19, 2025
Homeರಾಜ್ಯಮುಂದುವರೆದ ಮಳೆ ಅಬ್ಬರ, ಡ್ಯಾಂಗಳು ಭರ್ತಿ, ಹಲವೆಡೆ ನಾನಾ ಅವಾಂತರ ಸೃಷ್ಟಿ

ಮುಂದುವರೆದ ಮಳೆ ಅಬ್ಬರ, ಡ್ಯಾಂಗಳು ಭರ್ತಿ, ಹಲವೆಡೆ ನಾನಾ ಅವಾಂತರ ಸೃಷ್ಟಿ

Heavy rain

ಬೆಂಗಳೂರು,ಆ.19- ಉತ್ತರ ಭಾರತ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಮಳೆಯ ಆರ್ಭಟಕ್ಕೆ ಜನ ನಲುಗಿ ಹೋಗಿದ್ದಾರೆ.ಮುಂಬೈನಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಹಿಮಾಚಲ ಪ್ರದೇಶದಲ್ಲಿ ಮಳೆಯ ಅವಾಂತರಕ್ಕೆ ಅಪಾರ ಸಾವು-ನೋವು ಸಂಭವಿಸಿದೆ.

ಇತ್ತ ರಾಜ್ಯದಲ್ಲೂ ಕೂಡ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಒಂದು ವಾರದಿಂದ ಹಲವು ಜಿಲ್ಲೆಗಳಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಹೊಲ ಗದ್ದೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ಕೆಆರ್‌ಎಸ್‌‍, ತುಂಗಭದ್ರ, ಲಿಂಗನಮಕ್ಕಿ, ಶರಾವತಿ, ನಾರಾಯಣಪುರ ಸೇರಿದಂತೆ ಬಹುತೇಕ ಡ್ಯಾಂಗಳು ಭರ್ತಿಯಾಗಿ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ನದಿಪಾತ್ರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಎಚ್ಚರಿಕೆಯಿಂದ ಇರುವಂತೆ ನೀರಾವರಿ ಇಲಾಖೆ ಸೂಚನೆ ನೀಡಿದೆ.

ಕರಾವಳಿ ಮಲೆನಾಡಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಳೆಯ ಆರ್ಭಟಕ್ಕೆ ಜನ ಹೈರಾಣಾಗಿದ್ದಾರೆ. 2-3 ದಿನದಿಂದ ಮನೆಯಿಂದ ಹೊರಬರಲಾಗದೆ ಪರಿತಪಿಸುತ್ತಿದ್ದಾರೆ.ಹಾಸನ, ಉಡುಪಿ, ಮಂಡ್ಯ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆೆಯಾಗುತ್ತಿದ್ದು, ಹಳ್ಳಕೊಳ್ಳಗಳು ಭರ್ತಿಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಲವೆಡೆ ಗುಡ್ಡ ಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗಿದೆ.

ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಕೂಡ ಧಾರಕಾರ ಮಳೆ ಮುಂದುವರೆದಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, 91 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಳೆ ಹೆಚ್ಚಾದರೆ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹೊರಬಿಡುವ ಸಾಧ್ಯತೆಯಿದೆ.

ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಕಾರಣ ಜಲಾಶಯದ ಕೆಳಭಾಗದಲ್ಲಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೃಷ್ಣ, ಘಟಪ್ರಭ, ಮಲಪ್ರಭ, ವೇದಗಂಗ ಮತ್ತು ದೂದ್‌ಗಂಗ ನದಿಗಳು ತುಂಬಿ ಹರಿಯುತ್ತಿವೆ.

ಚಿಕ್ಕೋಡಿ ತಾಲ್ಲೂಕಿನ 8 ಸೇತುವೆಗಳು ಜಲಾವೃತಗೊಂಡು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡು ಓಡಾಟಕ್ಕೆ ಜನ ಪರದಾಡುವಂತಾಗಿದೆ. ಚಿಕ್ಕೋಡಿ ತಾಲ್ಲೂಕಿನ ಮುಲ್ಲಾಕಿನ ಗ್ರಾಮದಲ್ಲಿರುವ ಹಜರತ್‌ ಮನ್ಸೂರಿ ಹಾಲಿ ದರ್ಗ ದೂದ್‌ಗಂಗ ನದಿಯಲ್ಲಿ ಮುಳುಗಡೆಯಾಗಿದೆ. ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿದ್ದರಿಂದ ಪಂಪ್‌ಸೆಟ್‌, ಮೋಟಾರ್‌ಗಳು ಕೊಚ್ಚಿ ಹೋಗಿದ್ದು, ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಮಲಪ್ರಭ ನದಿ ತುಂಬಿ ಹರಿಯುತ್ತಿದ್ದು, ಸವದತ್ತಿ ಹೊರವಲಯದಲ್ಲಿರುವ ನವಿಲು ತೀರ್ಥ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. 10 ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದ್ದು, ನದಿಪಾತ್ರದ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳದಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ತುಂಗಭದ್ರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ.ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

RELATED ARTICLES

Latest News