Saturday, August 9, 2025
Homeರಾಜ್ಯರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ, ಹಲವು ಜಿಲ್ಲೆಗಳಲ್ಲಿ ನಾನಾ ಅವಾಂತರ

ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ, ಹಲವು ಜಿಲ್ಲೆಗಳಲ್ಲಿ ನಾನಾ ಅವಾಂತರ

Heavy rain continues in the state, causing various problems in many districts

ಕೋಲಾರ/ಬೆಳಗಾವಿ,ಆ.9- ರಾಜ್ಯದ ಹಲವೆಡೆ ಮಳೆಯ ಅಬ್ಬರ ಮುಂದುವರೆದಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಬಾಗಲಕೋಟೆ, ಕೊಪ್ಪಳ, ಗದಗ ಮುಂತಾದೆಡೆ ಮಳೆಯ ಅಬ್ಬರ ಜೋರಾಗಿದೆ.ಭಾರೀ ಮಳೆಯ ಅಬ್ಬರಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಳ್ಳಕೊಳ್ಳಗಳು ಭರ್ತಿಯಾಗಿ ಹರಿಯುತ್ತಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.

ಮಳೆಯಿಂದ ಎಚ್‌.ಡಿ.ಕೋಟೆ ತಾಲ್ಲೂಕಿನ ರಸ್ತೆಗಳು ಕೆಸರುಗದ್ದೆಯಂತಾಗಿವೆ. ತಾಲ್ಲೂಕು ಕೇಂದ್ರದ ಹೌಸಿಂಗ್‌ ಬೋರ್ಡ್‌, ಕೆಂಪಾಲಮ ಬಡಾವಣೆ, ರಂಗಯ್ಯ ಅಯ್ಯಂಗಾರ್‌ ಬಡಾವಣೆ, ಬೆಳಗನಹಳ್ಳಿ ರಸ್ತೆ, ಸ್ಟೇಡಿಯಂ ಬಡಾವಣೆ, ಹನುಮಂತನಗರ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿದೆ.

ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗಳಲ್ಲಿ ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ತಾಲ್ಲೂಕು ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ರಸ್ತೆಗಳಿಗೆ ನೀರು ನುಗ್ಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಗಂಗಮನ ಪಾಳ್ಯದ ಹಲವು ಮನೆಗಳಿಗೆ ನೀರು ನುಗ್ಗಿದೆ. ಅಂತರಗಂಗೆ ದರ್ಗಾದ ಬಳಿ ಬೃಹತ್‌ ಮರ ನೆಲಕ್ಕುರುಳಿದೆ.

ಯಲ್ಲಮ ಗುಡ್ಡ ಜಲಾವೃತ :
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಗುಡ್ಡದ ಮೇಲಿನಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಗುಡ್ಡದ ಹೊರವಲಯದಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಹಳ್ಳಗಳು ತುಂಬಿ ಹರಿಯುತ್ತಿವೆ. ಯಲ್ಲಮಗುಡ್ಡಕ್ಕೆ ಸಂಪರ್ಕಿಸುವ ರಸ್ತೆ ಸಂಚಾರ ಮುಳುಗಡೆಯಾಗಿ ಸ್ಥಗಿತಗೊಂಡಿದೆ.

ಉಗುರಗೊಳದಿಂದ ಯಲ್ಲಮ ಗುಡ್ಡಕ್ಕೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಸವದತ್ತಿ ನಗರದಿಂದ ಗುಡ್ಡಕ್ಕೆ ಹೋಗಬಹುದಾಗಿದೆ.ಇಂದಿನಿಂದ ನೂಲಹುಣ್ಣಿಮೆ ಜಾತ್ರೆ ನಡೆಯಲಿದ್ದು ಯಲ್ಲಮನ ಗುಡ್ಡಕ್ಕೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ರಸ್ತೆ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೋಗಲು ಭಕ್ತರು ಪರದಾಡುವಂತಾಗಿದೆ.

RELATED ARTICLES

Latest News