ಬೆಂಗಳೂರು,ಆ.18– ಮುಂಗಾರು ಮಳೆಯ ಆರ್ಭಟ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಹಳ್ಳಕೊಳ್ಳಗಳು ಭರ್ತಿಯಾಗಿ ಹೊಲಗದ್ದೆಗಳು ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗಿದೆ. 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೊಡಗಿನಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದ್ದು, ನಿರಂತರ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲದೆ ಜನ ಪರದಾಡುವಂತಾಗಿದೆ. ಹಾಸನದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಭಾರೀ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ.
ಹಲವೆಡೆ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ನಿರಂತರ ಮಳೆಗೆ ಜನ ಹೈರಾಣಾಗಿದ್ದು, ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ.ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿ ಬಾಚಿಹಳ್ಳಿ, ಒಳಲಹಳ್ಳಿ, ವಂಗಡಹಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಳೆ ಮುಂದುವರೆದಿದ್ದು, ಇನ್ನೂ ಹಲವೆಡೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ಸುಪ್ರಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅತ್ತ ಗಡಿ ಜಿಲ್ಲೆ ಬೀದರ್‌ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸಾವಿರಾರು ಎಕರೆಯಲ್ಲಿ ಬೆಳೆದ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಸೋಯಾ, ಕಬ್ಬು, ಉದ್ದು, ತೊಗರಿ ಸೇರಿದಂತೆ ಹತ್ತಾರು ಬೆಳೆಗಳು ನೀರು ಪಾಲಾಗಿವೆ.ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಲೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಬೆಣ್ಣೆತೋರ ಜಲಾಶಯ ಭರ್ತಿಯಾಗಿದೆ. ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ದಡದ ಜಮೀನುಗಳಲ್ಲಿನ ಬೆಳೆಗಳು ನೀರುಪಾಲಾಗಿವೆ.
ಜಿಲ್ಲೆಯ ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಹೆಸರುಬೇಳೆ ಸಂಪೂರ್ಣವಾಗಿ ನಾಶವಾಗಿದೆ. ಎಳ್ಳು, ತೊಗರಿ ನೀರಿನಿಂದ ಹಾನಿಯಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ಮಂಡ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಮೈಸೂರು ಭಾಗದಲ್ಲಿ ಮಳೆಯಾಗುತ್ತಿದ್ದು, ಕಾವೇರಿ ನದಿಗೆ ಒಳಹರಿವು ಹೆಚ್ಚಾಗಿದೆ.
ಭಾರೀ ಪ್ರಮಾಣದಲ್ಲಿ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ 33,052 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, 31,550 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಡ್ಯಾಂ ಮುಂಭಾಗ ಹಾಲ್ನೊರೆಯಂತೆ ಕಾವೇರಿ ನದಿಯ ಸೌಂದರ್ಯ ಕಂಗೊಳಿಸುತ್ತಿದೆ. ಸದ್ಯ 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ 124.54 ಅಡಿಗಳಷ್ಟು ನೀರು ಭರ್ತಿಯಾಗಿದೆ.
ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಭಾರೀ ಮಳೆಯಾಗುತ್ತಿದೆ. ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಳಹರಿವು ಭಾರೀ ಏರಿಕೆಯಾಗಿದೆ. 32,087 ಕ್ಯೂಸೆಕ್‌್ಸ ಒಳಹರಿವು ಬರುತ್ತಿದ್ದು, 6 ಕ್ರಶ್‌ಗೇಟ್‌ಗಳ ಮೂಲಕ 32,925 ಕ್ಯೂಸೆಕ್‌್ಸ ನೀರನ್ನು ಹೊರಬಿಡಲಾಗುತ್ತಿದೆ.
ಕಾರವಾರದ ಅಂಕೋಲ, ಕುಮುಟ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಜೋಯ್ಡಾ, ಯಲ್ಲಾಪುರ, ದಾಂಡೇಲಿ ಮುಂತಾದೆಡೆ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆಯಲ್ಲೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಗೆ ಮಳೆಯ ಅಬ್ಬರ: ಶಾಲಾಗಳಿಗೆ ರಜೆ ಘೋಷಣೆ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಗೆ ಮಳೆಯ ಅಬ್ಬರ ಹೆಚ್ಚಾಗಿದ್ದು, ತುಂಗಾನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಐದು ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿ ಕೇಂದ್ರಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಮಳೆಯ ಆರ್ಭಟದಿಂದಾಗಿ ಜಿಲ್ಲಾಡಳಿತ ಶಾಲೆಗಳು, ಅಂಗನವಾಡಿ ಹಾಗೂ ಶಿಶುಪಾಲನಾ ಕೇಂದ್ರಗಳು ಹಾಗೂ ಚಿಕ್ಕಮಗಳೂರು, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ರಜೆ ಘೋಷಣೆ ಮಾಡಲಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ತುಂಗಾ ನದಿಯ ಸುತ್ತ ಪ್ರವಾಸಿಗರು ಸಾರ್ವಜನಿಕರು ಓಡಾಡದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಶೃಂಗೇರಿ ದೇವಸ್ಥಾನದ ಪಕ್ಕದ ಗಾಂಧಿ ಮೈದಾನದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಲಾಗಿದೆ. ಗಾಂಧಿ ಮೈದಾನ ಸಂಪೂರ್ಣ ನೀರು ತುಂಬಿದೆ. ತುಂಗಾನದಿ ಉಕ್ಕಿ ಹರಿದ ಪರಿಣಾಮ ಶಾರದಾ ಪೀಠದ ಸಂಧ್ಯಾವಂದನ ಮಂಟಪ ಮುಳುಗಿದೆ. ನದಿಯ ಪ್ರವಾಹದಲ್ಲಿ ಜೀವ ಜಂತುಗಳು, ಮರದ ದಿಂಬಿಗಳು ತೇಲಿ ಹೋಗುತ್ತಿದೆ. ನದಿಪಾತ್ರದ ಹೊಲಗದ್ದೆ, ತೋಟಗಳಿಗೆ ನೀರು ನುಗ್ಗಿದ್ದು ಆತಂಕದಲ್ಲಿ ಮಲೆನಾಡಿಗರಿದ್ದಾರೆ. ನಿರಂತರ ಮಳೆಯಿಂದ ಭದ್ರಾನದಿ ತುಂಬಿ ಹರಿಯುತ್ತಿದ್ದು ಹೆಬ್ಬಾಳೆಯ ಹಳೆಯ ಸೇತುವೆ ಮುಳುಗಡೆಯಾಗಿ ನದಿಪಾತ್ರಗಳು ಜಲಾವೃತಗೊಂಡಿದೆ.
ಪ್ರಸಿದ್ದ ಶ್ರೀದೇವಿರಮನ ಬೆಟ್ಟ ಸಂಪೂರ್ಣ ಮಂಜಿನಿಂದ ಆವೃತ ಗೊಂಡಿದೆ. ಮೂಡಿಗೆರೆ ತಾಲೂಕಿನಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಇಡೀ ದಿನ ಜಿಟಿಜಿಟಿಯಾಗಿ ಸುರಿದು ಮನೆಯಿಂದ ಜನ ಹೊರಗೆ ಬರದಂತೆ ಮಾಡಿದೆ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ. ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಳಿಗ್ಗೆಯೂ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಕೆಮನಗುಂಡಿ, ಕುದುರೆಮುಖ, ಶೃಂಗೇರಿ, ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಆಲ್ದೂರು, ಎನ್ ಆರ್‌ಪುರ ಜಿಟಿಜಿಟಿ ಮಳೆಯಾಗಿದೆ.
ಮಳೆಯ ನಡುವೆ ಮುಳ್ಳಯ್ಯನಗಿರಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು ವಾಹನ ದಟ್ಟಣೆಗಳು ಹೆಚ್ಚಿದ್ದು ಪ್ರವಾಸಿಗರು ಪರದಾಡಿದರೆಮ ನಾಟಿ ಮಾಡಿರುವ ಗದ್ದೆಗಳಲ್ಲಿ ಕೆಲವು ಕಡೆಗಳಲ್ಲಿ ತಟ್ಟೆ ರೋಗ ಕಾಣಿಸಿಕೊಂಡಿದೆ. ಔಷಧಿ ಸಿಂಪರಣೆಗೆ ಮಳೆ ಬಿಡುವು ನೀಡುತ್ತಿಲ್ಲ. ಅಲ್ಲಲ್ಲಿ ವಿದ್ಯುತ್ ಕಂಬಗಳು ದೊರೆಗುರುಳಿದೆ.
ಅಧಿಕ ಮಳೆಯಿಂದ ತೇವಾಂಶ ಹೆಚ್ಚಾಗಿ ಅಡಿಕೆ ಫಸಲು ನೆಲಕ್ಕೆ ಉದುರುತ್ತಿದೆ. ಕೊಳೆರೋಗದ ಭೀತಿ ಎದುರಾಗಿದೆ ಇದೇ ರೀತಿ ನಿರಂತರವಾಗಿ ಮಗೆಮಳೆ ಸುರಿಯ ತೊಡಗಿದರೆ ಕಾಫಿ ಬೆಳೆಗೆ ಕೊಳೆ ರೋಗ ಅಧಿಕಗೊಳ್ಳುವ ಸಾಧ್ಯತೆಗಳಿದ್ದು ಕಾಳು ಮೆಣಸಿ ಗೆ ಒಡತ ಬೀಳಲಿದೆ.ಇಂದು ಬೆಳಗ್ಗೆಯಿಂದಲೇ ಅಧಿಕ ಮಳೆ ಬೀಳುತ್ತಿರುವುದರಿಂದ ಗದ್ದೆ ತೋಟಗಳಿಗೆ ತೆರಳಲು ರೈತರು ಮತ್ತು ಬೆಳೆಗಾರರು ಸಾಧ್ಯವಾಗುತ್ತಿಲ್ಲ ಗಾಳಿಯು ಬೀಸುತ್ತಿರುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಮನಸ್ಸು ಮಾಡುತ್ತಿಲ್ಲ ಚಳಿಯಾಗುತ್ತಿರುವುದರಿಂದ ಸೌದೆ ಒಲೆಯಲ್ಲಿ ಬೆಂಕಿ ಹಾಕಿಕೊಂಡು ದೇಹವನ್ನು ಬೆಚ್ಚಗಾಗಿಸುವ ಕೆಲಸ ಮಲೆನಾಡಿನಲ್ಲಿ ನಡೆಯುತ್ತಿದೆ.