ಬೆಂಗಳೂರು, ಅ.21– ವಾತಾವರಣ ದಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ಹಿಂಗಾರು ಮಳೆ ಚೇತರಿಕೆ ಕಂಡಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದೆ. ಭದ್ರಾವತಿ ತಾಲ್ಲೂಕಿನ ದಾಸರಕಲ್ಲಹಳ್ಳಿಯಲ್ಲಿ 146 ಮಿ.ಮೀ. ಹಾಗೂ ಬೆಂಗಳೂರಿನ ಪೂರ್ವ ಭಾಗದ ವನ್ನಾರ್‌ಪೇಟ್‌ನಲ್ಲಿ 70.5 ಮಿ.ಮೀ.ನಷ್ಟು ಗರಿಷ್ಠ ಮಳೆ ಬಿದ್ದಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಈಶಾನ್ಯ ಹಿಂಗಾರು ಆರಂಭದ ಬೆನ್ನಲ್ಲ್ಲೇ ಒಂದರ ಹಿಂದೆ ಮತ್ತೊಂದು ಎಂಬಂತೆ ಮೇಲೈ ಸುಳಿಗಾಳಿ ಹಾಗೂ ವಾಯುಭಾರ ಕುಸಿತಗಳು ಉಂಟಾಗುತ್ತಿವೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿದೆ. ಮತ್ತೊಂದು ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಹೀಗಾಗಿ ಅ.26ರವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯುವ ಲಕ್ಷಣಗಳಿವೆ ಎಂದು ತಜ್ಞರು ಹೇಳಿದ್ದಾರೆ.
ಕಳೆದ ಮೂರು-ನಾಲ್ಕು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಕಲ್ಯಾಣ ಕರ್ನಾಟಕ ಹೊರತುಪಡಿಸಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಮಳೆಯಾಗಿದೆ. ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಮಳೆಯಾಗಿದೆ. ಬೆಂಗಳೂರು ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಳೆ ಮಾಹಿತಿ ವಿವರ ಈ ಕೆಳಗಿನಂತಿದೆ. ದಕ್ಷಿಣ ಒಳನಾಡಿನ ಹೊನ್ನಾಳಿ 8, ಶಿವಮೊಗ್ಗ ಪಿಟಿಓ, ಚಿತ್ರದುರ್ಗ, ಅನವಟ್ಟಿಯಲ್ಲಿ ತಲಾ 7, ಹುಂಚದ ಕಟ್ಟೆ, ಬೆಂಗಳೂರು ನಗರ, ಶ್ರವಣ ಬೆಳಗೊಳ, ಲಿಂಗನಮಕ್ಕಿ, ದಾವಣಗೆರೆ ಪಿಟಿಓಗಳಲ್ಲಿ ತಲಾ 6, ಕುಣಿಗಲ್, ಕೆಆರ್‌ಎಸ್, ಜಯಪುರ, ನಾಯಕನಹಟ್ಟಿ, ಬಿ.ದುರ್ಗಾದಲ್ಲಿ ತಲಾ 5, ಎನ್.ಆರ್.ಪುರ, ತರೀಕೆರೆ, ಬೆಂಗಳೂರು ಹೆಚ್‌ಎಎಲ್, ಮಂಡ್ಯ ಜಿಲ್ಲೆಯ ಬೇಲೂರು, ದಾವಣಗೆರೆಯಲ್ಲಿ ತಲಾ 4, ಕೊಪ್ಪ, ಶೃಂಗೇರಿ, ತಿಪಟೂರು, ನಾಪೋಕ್ಲು, ಗೌರಿಬಿದನೂರಿನಲ್ಲಿ ತಲಾ 3 ಸೆ.ಮೀ.ನಷ್ಟು ಮಳೆಯಾಗಿದೆ.
ಉಳಿದಂತೆ ಬಾಳೆಹೊನ್ನೂರು, ಹೆಸರಘಟ್ಟ, ಮಾಗಡಿ, ಹಿರಿಯೂರು, ದೊಡ್ಡಬಳ್ಳಾಪುರ, ಸೋಮವಾರಪೇಟೆ, ತ್ಯಾಗರ್ಥಿ, ಎಲೆಕ್ಟ್ರಾನಿಕ್ ಸಿಟಿ, ಕೊಟ್ಟಿಗೇಹಾರ, ಅಜ್ಜಂಪುರ, ಬೇಲೂರು, ಕಳಸಗಳಲ್ಲಿ ತಲಾ 2 ಹಾಗೂ ಹೊಸದುರ್ಗ, ಭಾಗಮಂಡಲ, ರಾಮನಗರ, ಹರಪನಹಳ್ಳಿಗಳಲ್ಲಿ ತಲಾ ಒಂದು ಸೆ.ಮೀ.ನಷ್ಟು ಮಳೆ ಬಿದ್ದಿದೆ.
ಕದ್ರಾ 11, ಕುಂದಾಪುರ 9, ಮುಂಡ ಗೋಡ 8, ಕಾರವಾರ 7, ಹೊನ್ನಾವರ 6, ಬನವಾಸಿ, ಸಿದ್ದಾಪುರ ತಲಾ 5, ಗೇರುಸೊಪ್ಪ, ಗೋಕರ್ಣ, ಮಂಕಿ ತಲಾ 4, ಯಲ್ಲಾಪುರ, ಅಂಕೋಲ, ಕುಮಟಾ, ಕೋಟಾದಲ್ಲಿ ತಲಾ 3 ಸೆ.ಮೀ., ಜಗಲ್‌ಪೇಟೆಯಲ್ಲಿ ಒಂದು ಸೆ.ಮೀ.ನಷ್ಟು ಕರಾವಳಿ ಭಾಗದಲ್ಲಿ ಮಳೆಯಾಗಿದೆ.
ಉತ್ತರ ಕರ್ನಾಟಕ ಭಾಗದ ಶಿಗ್ಗಾವಿ 10, ಕಲಘಟಗಿ 5 ಹಾವೇರಿ ಎಪಿಎಂಸಿ, ಗುತ್ತಲಲ್ಲಿ ತಲಾ 4, ಲೋಂಡಾ, ಹಾವೇರಿ ಪಿಟಿಓಯಲ್ಲಿ ತಲಾ 3, ಬೆಳಗಾವಿ 2. ಲಕ್ಷಮೇಶ್ವರ, ಬೆಳಗಾವಿ ಪಿಟಿಓ, ಕುಂದಗೋಳ, ಧಾರವಾಡ ಪಿಟಿಓ ಹಿಡ್ಕಲ್ ನಲ್ಲಿ ತಲಾ ಒಂದು ಸೆ.ಮೀ. ನಷ್ಟು ಮಳೆ ಬಿದ್ದಿದೆ.