Sunday, September 8, 2024
Homeರಾಜ್ಯಕರಾವಳಿಯಲ್ಲಿ ಮತ್ತೆ ಭಾರೀ ಮಳೆ ಮುನ್ಸೂಚನೆ

ಕರಾವಳಿಯಲ್ಲಿ ಮತ್ತೆ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಜು.17-ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಇಂದು ಕೂಡ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.

ಕರಾವಳಿ ಭಾಗದಲ್ಲಿ ಬಲವಾದ ಮೇಲೈ ಗಾಳಿಯೊಂದಿಗೆ ಅತ್ಯಧಿಕ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಉಲ್ಲೇಖಿಸಿ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಅಲ್ಲದೆ, ನಾಳೆಯಿಂದ ಜು.21ರವರೆಗೆ ಕರಾವಳಿ ಭಾಗದಲ್ಲಿ ಜೋರಾದ ಗಾಳಿ ಮತ್ತು ಮಳೆ ಮುಂದುವರೆಯಲಿದೆ. ಇಂದಿನಿಂದ ಜು.21ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಹವಾಮಾನ ಮುನ್ಸೂಚನೆಗಳಿವೆ. ಹೀಗಾಗಿ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಉತ್ತರ ಒಳನಾಡಿನಲ್ಲಿ ಮಳೆ ಕಡಿಮೆ ಇದೆ. ಆದರೆ, ಜುಲೈ 19ರಿಂದ ಮೂರು ದಿನ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ.ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಅರಬ್ಬೀ ಸಮುದ್ರದಲ್ಲಿ ಮೇಲುಬ್ಬರ(ಟ್ರಫ್‌) ಉಂಟಾಗಿರುವ ಪರಿಣಾಮ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಕೆಲವೆಡೆ ಭಾರೀ ಮಳೆ ಹಾಗೂ ಮತ್ತೆ ಕೆಲವೆಡೆ ಹಗುರ ಇಲ್ಲವೇ ಸಾಧಾರಣ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ ಬಿತ್ತನೆ ಸಂದರ್ಭದಲ್ಲಿ ನಿರಂತರ ಮಳೆಯಾಗುತ್ತಿರುವುದು ರೈತರಿಗೆ ಖುಷಿ ತಂದಿದೆ. ಮುಂಗಾರು ಬೆಳೆಗಳ ಬಿತ್ತನೆಗೆ ಸೂಕ್ತ ವಾತಾವರಣ ಸೃಷ್ಟಿಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕಾಗಿವೆ.

RELATED ARTICLES

Latest News