ಬೆಂಗಳೂರು, ಜು.15-ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಹಾಗೂ ಪಿಯುಸಿವರೆಗೂ ಕಾಲೇಜಿಗೆ ರಜೆ ನೀಡಲಾಗುತ್ತಿದೆ. ರಾಜ್ಯದ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಮಲೆನಾಡು ಸೇರಿದಂತೆ ಕೆಲವೆಡೆ ಉತ್ತಮ ಮಳೆಯಾಗಿದೆ.
ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಮೋಡ ಕವಿದ ವಾತಾವರಣವಿರಲಿದ್ದು, ಆಗಾಗ್ಗೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ.
ಕೇರಳದ ಉತ್ತರ ಕರಾವಳಿಯೊಂದ ಮಹಾರಾಷ್ಟ್ರದವರೆಗೆ ಅರಬ್ಬೀ ಸಮುದ್ರದಲ್ಲಿ ಮೇಲುಬ್ಬರ(ಟ್ರಫ್) ಉಂಟಾಗಿದೆ. ಜೊತೆಗೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿದೆ. ಆಂದ್ರ ಪ್ರದೇಶದ ಕರಾವಳಿಯ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದೆ ಪರಿಚಲನೆ ಉಂಟಾಗುತ್ತಿದೆ.
ಈ ಎರಡು ಕಾರಣಗಳಿಂದ ಮೋಡ ಕವಿದ ವಾತಾವರಣ ಕಂಡುಬರಲಿದೆ. ಕೆಲವೆಡೆ ತುಂತುರು ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.ನಾಳೆಯಿಂದ ಜು.19ರವರಗೆ ಜೋರಾದ ಮೇಲೈ ಗಾಳಿ ಬೀಸಲಿದೆ. ಅಲ್ಲದೆ, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಉಲ್ಲೇಖಿಸಿ ಹೇಳಿದೆ.
ಉತ್ತರ ಒಳನಾಡಿನಲ್ಲಿ ನಾಳೆಯಿಂದ ಎರಡು ದಿನ ಅಧಿಕ ಮಳೆಯಾಗುವ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ನಿನ್ನೆಯಿಂದಲೇ ಕೆಲವೆಡೆ ಆಗಾಗ್ಗೆ ತುಂತುರು ಮಳೆ ಆರಂಗೊಂಡಿದ್ದು, ಇಂದೂ ಮುಂದುವರೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಆರಂಭಗೊಂಡ ಹಗುರ ಮಳೆ ಇಂದೂ ಕೂಡ ಮುಂದುವರೆದಿದೆ.
ಮೋಡ ಕವಿದಿರುವುದರಿಂದ ತಂಪಾದ ವಾತಾವರಣವಿದ್ದು, ಚಳಿಯ ಅನುಭವವಾಗುತ್ತಿದೆ. ಜಿಟಿಜಿಟಿ ಮಳೆಯಾಗುವ ಲಕ್ಷಗಳು ಗೋಚರಿಸುತ್ತಿವೆ. ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವವರು ಕೊಡೆ, ಜರ್ಕಿನ್‌ಗಳ ಆಶ್ರಯ ಪಡೆದಿರುವುದು ಹಲವೆಡೆ ಕಂಡುಬಂದಿತು.