Friday, October 18, 2024
Homeರಾಜ್ಯಇಂದು ಮತ್ತು ನಾಳೆ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ..!

ಇಂದು ಮತ್ತು ನಾಳೆ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ..!

Heavy rain forecast in the state today and tomorrow

ಬೆಂಗಳೂರು,ಅ.16- ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಇಂದೂ ಕೂಡ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.

ನಿನ್ನೆ ಧಾರಕಾರವಾಗಿ ಸುರಿದ ಮಳೆ ನಿನ್ನೆ ಸಂಜೆಯಿಂದ ತುಸು ಕಡಿಮೆಯಾಗಿತ್ತಾದರೂ ಸಂಪೂರ್ಣವಾಗಿ ನಿಂತಿರಲಿಲ್ಲ. ಇಂದು ಬೆಳಿಗ್ಗೆ ಯಥಾರೀತಿ ಜಿಟಿಜಿಟಿ ಮಳೆ ಆರಂಭವಾಯಿತು. ನಿನ್ನೆಗೆ ಹೋಲಿಸಿದರೆ ಇಂದು ಮಳೆಯ ಪ್ರಮಾಣ ರಾಜ್ಯದ ಒಳನಾಡಿನಲ್ಲಿ ಕಡಿಮೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಇದೇ ರೀತಿ ಕರಾವಳಿಯಲ್ಲಿ ಇಂದು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂದು ಮತ್ತು ನಾಳೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಮುಂದುವರೆಯಲಿದ್ದು, ಕೆಲವೆಡೆ ಗುಡುಗು-ಮಿಂಚು ಹಾಗೂ ಜೋರಾದ ಗಾಳಿಯಿಂದ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಅ.1 ರಿಂದ ನಿನ್ನೆಯವರೆಗೆ ಅವಧಿಯಲ್ಲಿ ರಾಜ್ಯದಲ್ಲಿ 97 ಮಿ.ಮೀ. ನಷ್ಟು ಮಳೆಯಾಗಿದೆ. ವಾಡಿಕೆ ಮಳೆ 80 ಮಿ.ಮೀ.ನಷ್ಟಿದ್ದು, ವಾಡಿಕೆಗಿಂತ ಶೇ.22 ರಷ್ಟು ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 108 ಮಿ.ಮೀ., ಉತ್ತರ ಒಳನಾಡಿನಲ್ಲಿ 73 ಮಿ.ಮೀ., ಕರಾವಳಿಯಲ್ಲಿ 138 ಮಿ.ಮೀ. ಹಾಗೂ ಮಲೆನಾಡಿನಲ್ಲಿ 127 ಮಿ.ಮೀ.ನಷ್ಟು ಮಳೆಯಾಗಿದ್ದು, ರಾಜ್ಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ನಿನ್ನೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 20 ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದರೆ, ಚಾಮರಾಜನಗರ, ಬಾಗಲಕೋಟೆ, ಮಂಡ್ಯ, ಯಾದಗಿರಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾಗಶಃ ವ್ಯಾಪಕ ಮಳೆಯಾಗಿದೆ.

ಮೈಸೂರು, ಬಳ್ಳಾರಿ, ಗದಗದಲ್ಲಿ ಚದುರಿದಂತೆ ಹಾಗೂ ಬೀದರ್‌, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ.ನಿನ್ನೆ ಬೆಳಿಗ್ಗೆ 8.30 ರಿಂದ ಇಂದು ಬೆಳಿಗ್ಗೆ 8.30 ರ ನಡುವಿನ ಅವಧಿಯಲ್ಲಿ ಆನೆಕಲ್‌ ತಾಲ್ಲೂಕಿನ ನೇರಿಗ ಗ್ರಾಮ ಪಂಚಾಯಿತಿಯಲ್ಲಿ 152.5 ಮಿ.ಮೀ.ನಷ್ಟು ಅಧಿಕ ಪ್ರಮಾಣದ ಮಳೆಯಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಸೋಮಶೆಟ್ಟಿಹಳ್ಳಿಯಲ್ಲಿ 102.5, ಆನೆಕಲ್‌ ತಾಲ್ಲೂಕಿನ ಮುಗಳೂರಿನಲ್ಲಿ 92.5, ಚಿಕ್ಕಬಾಣಾವರದಲ್ಲಿ 90, ಕೆಎಸ್‌‍ಎನ್‌ಎಂಡಿಸಿ ಕ್ಯಾಂಪಸ್‌‍ನಲ್ಲಿ 89.5, ಶಿವಕೋಟೆಯಲ್ಲಿ 88, ವಿದ್ಯಾರಣ್ಯಪುರದಲ್ಲಿ 80.5, ಜಕ್ಕೂರು 75.5, ದೊಡ್ಡಗುಬ್ಬಿ 74, ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದಲ್ಲಿ 138.5, ಬೊಮಲಾಪುರದಲ್ಲಿ 62.5, ಬ್ರಹಾವರ ತಾಲ್ಲೂಕಿನ ಹರಡಿಯಲ್ಲಿ 103.5, ಕುಂದಾಪುರ ತಾಲ್ಲೂಕಿನ ಆನೆಗಲ್ಲಿನಲ್ಲಿ 90, ಗಂಗೊಳ್ಳಿಯಲ್ಲಿ 88.5, ಹೆಮಾಡಿಯಲ್ಲಿ 70.5, ಹಂಪಾರು 70, ಕರ್ಕುಂಜೆ 66, ಗುಜ್ಜಾಡಿ 64.5, ಮಾಲೂರು ತಾಲ್ಲೂಕಿ ಡಿ.ಎನ್‌.ದೊಡ್ಡಿಯಲ್ಲಿ 85.5, ನೆಲಮಂಗಲ ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ 79.5, ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ 79, ಹೊಸಕೆರೆ 73.5, ತುಮಕೂರು ತಾಲ್ಲೂಕಿನ ಕೆ.ಪಾಲಸಂದ್ರ 72.5 ಹೀಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ.

ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿದ್ದು, ಇದೇ ಪರಿಸ್ಥಿತಿ ನಾಳೆಯವರೆಗೂ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ.

RELATED ARTICLES

Latest News