Sunday, July 7, 2024
Homeರಾಜ್ಯಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ ಇನ್ನೆರೆಡು ದಿನ ಭಾರಿ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ ಇನ್ನೆರೆಡು ದಿನ ಭಾರಿ ಮಳೆ

ಬೆಂಗಳೂರು, ಮೇ 20- ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತ, ಮೇಲೈ ಸುಳಿಗಾಳಿ ಸೇರಿದಂತೆ ವಾತಾವರಣದಲ್ಲಿ ಉಂಟಾಗಿರುವ ಪ್ರಮುಖ ಬದಲಾವಣೆಗಳಿಂದ ರಾಜ್ಯದ ದಕ್ಷಿಣ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನೆರೆಡು ದಿನ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ.

ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಆ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚೂ ಕಡಿಮೆ ಇದೇ ರೀತಿ ಒಂದು ವಾರ ಕಾಲ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಿದೆ. ಕೆಲವೆಡೆ ಭಾರೀ ಮಳೆಯಾಗಿದ್ದರೆ, ಕೆಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಇನ್ನು ಮುಂದಿನ ದಿನಗಳಲ್ಲೂ ಹೆಚ್ಚಾಗುವ ಮುನ್ಸೂಚನೆಗಳಿವೆ.

ನಿರಂತರ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಜಮೀನು ಸಿದ್ಧತೆ ಮಾಡುವ ಕಾರ್ಯದಲ್ಲಿ ರೈತ ಸಮುದಾಯ ತೊಡಗಿದೆ.ಭಾಗಶಃ ಮೋಡ ಕವಿದಿರುವ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಕೆಲವೊಮ್ಮೆ ಆಗೊಮ್ಮೆ, ಈಗೊಮ್ಮೆ ಮಳೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ನೈರುತ್ಯ ಮುಂಗಾರು ಮೇ 31ಕ್ಕೆ ಕೇರಳ, ಕರಾವಳಿ ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದಕ್ಕೆ ಪೂರಕವಾಗಿ ಬಂಗಾಳಕೊಲ್ಲಿ ಹಾಗೂ ಅರಬ್ಬಿಸಮುದ್ರದಲ್ಲಿ ವಾತಾವರಣ ಮಾರ್ಪಾಡಾಗುತ್ತಿದ್ದು, ಈ ಸಮಯದಲ್ಲಿ ಸಾಕಷ್ಟು ಮಳೆಯಾಗಲಿದೆ.

ನಿರೀಕ್ಷೆಯಂತೆ ಮೇ ಅಂತ್ಯಕ್ಕೆ ಮುಂಗಾರು ಕೇರಳ ಪ್ರವೇಶಿಸಿದರೆ ಅನಂತರ ಎರಡು-ಮೂರು ದಿನಗಳಲ್ಲಿ ರಾಜ್ಯವನ್ನು ಮುಂಗಾರು ಪ್ರವೇಶಿಸಲಿದೆ. ಬಳಿಕ ಒಂದು ವಾರದೊಳಗೆ ರಾಜ್ಯಾದ್ಯಂತ ಮುಂಗಾರು ವ್ಯಾಪಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

RELATED ARTICLES

Latest News