ಬೆಂಗಳೂರು,ಜು.30- ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಅತ್ತ ಉತ್ತರಕರ್ನಾಟಕದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರೂ ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದರಿಂದ ಕೃಷ್ಣಾ ಹಾಗೂ ಉಪನದಿಗಳ ಮಟ್ಟ ಏರಿಕೆಯಾಗಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಗಡಿನಾಡುಗಳಲ್ಲಿ ಹಳ್ಳಿಗಳು ಜಲಾವೃತವಾಗಿ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಬಾಗಮಂಡಲ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯ ಮುಂಬಾಗಿಲ ಮೆಟ್ಟಿಲವರೆಗೆ ನೀರು ಆವರಿಸಿದೆ.
ಅತ್ತ ಮಲೆನಾಡಿನಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಭಾರಿ ಮಳೆಯಿಂದ ಚಾರ್ಮುಡಿ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗುರುಳಿ ಚಿಕ್ಕಮಗಳೂರಿನ ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿ ಕೊಟ್ಟಿಗೆಹಾರ ಸಮೀಪ ಟ್ರಾಫಿಕ್ ಜಾಮ್ ಆಗಿತ್ತು. ವಾಹನಗಳನ್ನು ನಿಲ್ಲಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಸಕಲೇಶಪುರ ಸಮೀಪ ಶಿರಾಡಿಘಾಟ್ ರಸ್ತೆಯ ದೊಡ್ಡತಪ್ಪಲೆ ಬಳಿ ಭೂ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ರಸ್ತೆ ಪಕ್ಕದಲ್ಲಿ ಹಾದುಹೋಗಿರುವ ಎತ್ತಿನಹೊಳೆ ಪೈಪ್‌ಲೈನ್ ಸಮೀಪ ಭೂಮಿ ಕುಸಿದು ಬಾರ್ಲಿ- ಮಲ್ಲಗದ್ದೆ-ಕಾಡುಮನೆ ಸೇರಿದಂತೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದೆ. ಕಾವೇರಿ ಜಲಾಶಯಗಳೀಂದ ನದಿಗೆ ನೀರು ಬಿಡುತ್ತಿರುವ ಹೊರಹರಿವಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ 9 ಗ್ರಾಮಗಳು ಪಾರಾಗಿವೆ.
ಕಾವೇರಿ ನದಿಪಾತ್ರದ ಕೊಳ್ಳೆಗಾಲ ತಾಲ್ಲೂಕಿನ ದಾಸಪುರ, ಮಳ್ಳೂರು, ಹಳೆ ಅನ್ನಗಳ್ಳಿ, ಹಳೆ ಹಂಪಾಪುರ, ಅರಳೆ ಗ್ರಾಮದ ಪ್ರದೇಶಗಳಲ್ಲಿ ಪ್ರವಾಹ ನೀರಿನ ಪ್ರಮಾಣ ಕಡಿಮೆಯಾಗಿದೆ.ಸದ್ಯ ಕಾವೇರಿ ಜಲಾನಯನದ ಪ್ರದೇಶದಲ್ಲಿ ಯಾವುದೇ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಇಲ್ಲ. ಪ್ರವಾಹದಿಂದ ಆದ ಬೆಳೆಹಾನಿಯ ಬಗ್ಗೆ ಡ್ರೋನ್‌ಗಳ ಮೂಲಕ ಸರ್ವೆ ನಡೆಸಲಾಗುತ್ತಿದೆ.
ಬೆಳಗಾವಿ :
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕೃಷ್ಣ, ದೂದ್‌ಗಂಗಾ, ವೇದ್‌ಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ಪ್ರವಾಹದಿಂದ 44 ಸೇತುವೆಗಳು ಮುಳುಗಡೆಯಾಗಿವೆ. ಇಡ್ಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯಬಿಟ್ಟಿರುವುದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಪಿ.ವೈ.ಹುಣಶ್ಯಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ಇಡೀ ಗ್ರಾಮಕ್ಕೆ ಗ್ರಾಮವೇ ನೀರಿನಿಂದ ಆವೃತವಾಗಿರುವುದಿರಂದ ಜನಜೀವನ ಸ್ತವ್ಯಸ್ಥವಾಗಿದ್ದು, ಗ್ರಾಮದಲ್ಲಿರುವ ಎಲ್ಲರನ್ನೂ ಸ್ಥಳಾಂತರ ಮಾಡಲಾಗಿದೆ. ಹಲವೆಡೆ ಮಳೆ ಎಡಬಿಡದೆ ಬರುತ್ತಿದ್ದರೆ, ಕೆಲವೆಡೆ ಮಳೆ ಬಿಟ್ಟುಬಿಟ್ಟು ಬರುತ್ತಿದೆ.
ಒಟ್ಟಾರೆ ಮಳೆಯಿಂದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರಕರ್ನಾಟಕ ಕರಾವಳಿ, ದಕ್ಷಿಣ ಕರ್ನಾಟಕ ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟದಿಂದ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಮಧ್ಯ ಕರ್ನಾಟಕ ಭಾಗದಲ್ಲಿ ಮಳೆ ಅಷ್ಟೇನೂ ಪರಿಣಾಮ ಬೀರಿಲ್ಲ.
ಕಾಫಿನಾಡಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ:
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ ಜೋರಾಗಿದ್ದು, ಭಾರೀ ಬಿರುಗಾಳಿ ಮಳೆಗೆ ಚಾರ್ಮುಡಿ ಘಾಟ್‌ನ 9ನೆ ತಿರುವಿನಲ್ಲಿಗುಡ್ಡ ಕುಸಿತ ಉಂಟಾದ ಪರಿಣಾಮ ಬೆಂಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿ ವಾಹನ ಚಾಲಕರು ಹಾಗೂ ಪ್ರಯಾಣಿಕರು ಪರದಾಡುವಂತಾಗಿತ್ತು.
ರಾತ್ರಿ ಭಾರೀ ಮಳೆಯಾಗಿದ್ದು, ಗುಡ್ಡಕುಸಿತದ ಪರಿಣಾಮ ಕೊಟ್ಟಿಗೆಹಾರದ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಕತ್ತಲಲ್ಲೇ ಕಾಲ ಕಳೆಯುವಂತಾಗಿತ್ತು. ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಮರ ತೆರವುಗೊಳಿಸಿದ ನಂತರ ವಾಹನಗಳು ಮಂದಗತಿಯಲ್ಲಿ ಸಾಗಿದವು.ಎನ್‌ಆರ್ ಪುರ ತಾಲೂಕಿನ ಮಹಲ್ಲೋಡು ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಬಾಳೆಹೊನ್ನೂರು- ಕಳಸ ಮಾರ್ಗ ಬಂದ್ ಆಗಿತ್ತು.
ಕಳೆದ ರಾತ್ರಿ ಭಾರೀ ಮಳೆಯಾಗಿದ್ದು , ಭದ್ರಾನದಿ ತುಂಬಿ ಹರಿಯುತ್ತಿದ್ದು, ನದಿಪಕ್ಕದ ಗ್ರಾಮಗಳಾದ ಬರೇಗುಡ್ಡಾ, ಮಹಲ್ಲೋಡು ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಧಾರಾಕಾರ ಮಳೆಯಿಂದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಹಾಗೂ ಎನ್‌ಆರ್ ಪುರ ತಾಲೂಕಿನ ಅಂಗನವಾಡಿ ಮತ್ತು ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೊಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.