ಬೆಂಗಳೂರು, ಮೇ 24– ನೈರುತ್ಯ ಮುಂಗಾರು ಒಂದು ವಾರ ಮುಂಚಿತವಾಗಿ ಆರಂಭವಾಗುವ ಎಲ್ಲಾ ಲಕ್ಷಣಗಳಿದ್ದು, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಇಂದಿನಿಂದ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕವಾದ ಮಳೆಯಾಗುವ ಮುನ್ಸೂಚನೆಗಳಿವೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಮೇಲ್ವೆ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆಗಳಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಈ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಬೆಳಗಾವಿ, ಧಾರವಾಡ, ಹಾವೇರಿ, ಹಾಸನ, ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಉಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಪ್ರಮಾಣದ ಮಳೆಯಾಗಲಿದೆ. ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೂ ಮಳೆ ಪ್ರಮಾಣ ಇಂದಿನಿಂದ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದಿನಿಂದ ಮೇ 28ರ ವರೆಗೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗಲಿದೆ. ಪೂರ್ವ ಅರಬೀ ಸಮುದ್ರದ ಗೋವಾ-ಕೊಂಕಣ ಭಾಗದ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿದೆ. ಜೊತೆಗೆ ಮೇಲೆ ಸುಳಿಗಾಳಿಯೂ ಇರುವುದರಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
ವಾಯುಭಾರ ಕುಸಿತ ಹಾಗೂ ಮೇಲ್ವೆ ಸುಳಿಗಾಳಿಗಳೆರಡೂ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ. ಇದರಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದೆ. ಕೆಲವೆಡೆ ಗಾಳಿಯು ಗಂಟೆಗೆ 40ರಿಂದ 50 ಕಿ.ಮೀ.ವೇಗದಲ್ಲಿ ಬೀಸಲಿದೆ ಎಂದಿದ್ದಾರೆ. ಈಗಾಗಲೇ ಮಲೆನಾಡು, ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಕಾಸರದಲ್ಲಿ 16 ಸೆ.ಮೀ., ಕೊಡಗಿನ ಭಾಗಮಂಡಲದಲ್ಲಿ 10 ಸೆ.ಮೀ. ಹಾಗೂ ಲೋಂಡಾದಲ್ಲಿ 6 ಸೆ.ಮೀ.ನಷ್ಟು ಭಾರೀ ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪೂರ್ವ ಮುಂಗಾರು ಮಳೆಯು ಕಳೆದ 8-10 ದಿನಗಳಿಂದ ನಿರಂತರವಾಗಿ ಬೀಳುತ್ತಿದೆ. ಇದರಿಂದ ಮುಂಗಾರು ಆಗಮನಕ್ಕೆ ಅನುಕೂಲವಾಗಿದೆ. ಹವಾಮಾನ ಇಲಾಖೆ ಪ್ರಕಾರ ನಾಳೆಯೊಳಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದೆ. ಆ ನಂತರ ನಾಲೈದು ದಿನದಲ್ಲಿ ಚಾಮರಾಜನಗರ, ಮೈಸೂರು, ಕರಾವಳಿ ಜಿಲ್ಲೆಗಳ ಮೂಲಕ ಮುಂಗಾರು ರಾಜ್ಯ ಪ್ರವೇಶಿಸಲಿದೆ.
ಸಾಮಾನ್ಯವಾಗಿ ಜೂನ್ ಒಂದಕ್ಕೆ ಮುಂಗಾರು ಕೇರಳ ಪ್ರವೇಶ ಮಾಡುತ್ತಿತ್ತು. ಈ ಬಾರಿ ಒಂದು ವಾರ ಮುಂಚಿತವಾಗಿ ಆಗಮಿಸುತ್ತಿದೆ. ಮುಂಗಾರಿನ ಆಗಮನಕ್ಕೆ ಪೂರಕವಾದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.