ಬೆಂಗಳೂರು , ಆ. 11– ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಶ್ಲೇಷ ಮಳೆ ಅಬ್ಬರಿಸಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಅಕ್ಷರಸಹ ಜನ ಜೀವನ ಅಸ್ತವ್ಯಸ್ತ ಗೊಂಡಿದೆ.
ದಾವಣಗೆರೆ :ಬೆಣ್ಣೆ ನಗರಿ ದಾವಣಗೆರೆ ಮಳೆಗೆ ತತ್ತರಿಸಿದ್ದು ಜಿಲ್ಲೆಯ ಬಹುತೇಕ ತಾಲೂಕು ,ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು ಜಗಳೂರು ಭಾಗದ ಕೆಳಗೋಟೆ, ಹಿರೇಅರಕೆರೆ, ಚಿಕ್ಕಮನಹಟ್ಟಿ, ಚಿಕ್ಕಮನ ಹೊಳೆ, ಅಣಬೂರು ಸೇರಿದಂತೆ ಹಲವು ಕೆರೆಗಳು ಕೋಡಿ ಬಿದ್ದಿದ್ದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.ಮತ್ತೊಂದೆಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದ್ದರೆ. ಮತ್ತೆ ಕೆಲವೆಡೆ ಮಳೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿ ಗೆದರಿವೆ.
ದೇವರಿಗೆ ಜಲ ದಿಗ್ಬಂದನ: ಬೆಳಗಾವಿ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿದ್ದು ಅಥಣಿ ತಾಲೂಕಿನ ಐಗಳಿ ಹಾಗೂ ಕೊಕಟನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಕೆಲವು ಕಡೆ ರಸ್ತೆಯ ಮೇಲೆ ಹಳ್ಳದ ನೀರು ಹರಿಯುತ್ತಿದ್ದು ಗ್ರಾಮಗಳಿಗೆ ಸಂಪರ್ಕಕಡಿತ ಗೊಂಡಿದೆ.
ಕೊಕಟನೂರು ಗ್ರಾಮದ ಯಲ್ಲಮನವಾಡಿಯ ಶ್ರೀ ಯಲ್ಲಮ ದೇವಾಯದ ಗರ್ಭಗುಡಿಗೆ ನೀರು ನುಗ್ಗಿದ್ದು ಭಕ್ತರು ಹಾಗೂ ಸ್ಥಳಿಯರು ದೇವಾಲಯದ ಆಡಳಿತ ಮಂಂಡಳಿಯವರು ನೀರು ಹೊರಹಾಕಲು ಹರಸಾಹಸ ಪಟ್ಟರು.
ಠಾಣೆಗೆ ನುಗ್ಗಿದ ನೀರು: ಕೋಟೆನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ ಜೋರಾಗಿದ್ದು ನಾಯಕನಹಟ್ಟಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯಿಂದ ಮಳೆ ನೀರು ಹರಿಯಲು ಜಾಗವಿಲ್ಲದೆ ಪೊಲೀಸ್ ಠಾಣೆ ಆವರಣಕ್ಕೆ ನುಗ್ಗಿದ್ದು ಠಾಣೆ ದ್ವಿಪದಂತಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ಠಾಣೆ ಒಳಗೂ ಪ್ರವೇಶಿಸುವ ಆತಂಕದಲ್ಲಿ ಸಿಬ್ಬಂದಿಗಳಿದ್ದಾರೆ.
ಬೆಳೆ ಹಾನಿ: ಗದಗ ಜಿಲ್ಲೆಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಸುರಿಯುತ್ತಿದ್ದು ಜೋಳ, ಭತ್ತ ಮತ್ತು ಈರುಳ್ಳಿ ಬೆಳೆಗಳಿಗೆ ನೀರು ಆವರಿಸಿ ಬೆಳೆ ಸಂಪೂರ್ಣ ನಾಶವಾಗಿದ್ದರೆ, ಮತ್ತೊಂದೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡಿ ಜಾಗರಣೆ ಮಾಡುವಂತಾಗಿತ್ತು.
ಜಿಲ್ಲೆಯ ನರಗುಂದ ,ರೋಣ, ಗಜೇಂದ್ರಗಡ, ಸೇರಿದಂತೆ ಮತ್ತಿತರೆಡೆ ಭಾರಿ ಮಳೆಯಾಗಿದೆ.
ಸಿಡಿಲಿಗೆ ಮಹಿಳೆ ಸಾವು: ಬಿಸಿಲು ನಾಡು ರಾಯಚೂರಿನಲ್ಲೂ ಸಹ ಮಳೆ ಆರ್ಭಟ ಜೋರಾಗಿದ್ದು ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದ ಮಹಿಳೆಯೊಬ್ಬರು ಸಿಡಿಲಿಗೆ ಬಲಿಯಾಗಿರುವ ಘಟನೆ ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.
ಭವಾನಿ (23) ಮೃತಪಟ್ಟ ಮಹಿಳೆ. ನಿನ್ನೆ ಇವರು ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದಾಗ ಮಳೆ ಬಂದಿದೆ. ಈ ವೇಳೆ ಮಹಿಳೆ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.