Sunday, September 8, 2024
Homeರಾಜ್ಯಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಾನಾ ಅವಾಂತರ ಸೃಷ್ಟಿಸಿದ ಭಾರಿ ಮಳೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಾನಾ ಅವಾಂತರ ಸೃಷ್ಟಿಸಿದ ಭಾರಿ ಮಳೆ

ಬೆಂಗಳೂರು, ಮೇ 19- ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾತ್ರಿ ಸುರಿದ ಮಳೆ ಭಾರಿ ಅನಾಹುತವನ್ನೇ ಸೃಷ್ಟಿಸಿದೆ. ನಗರದ ವಿವಿಧೆಡೆ ಮಳೆಯಾಗಿದ್ದು, ಯಲಹಂಕದ ಸುತ್ತಮುತ್ತ ಭಾರಿ ಮಳೆಯಾದ ಪರಿಣಾಮ ನಾರ್ತ್‌ ವುಡ್‌ ಅಪಾರ್ಟ್‌ಮೆಂಟ್‌ ಸಂಪೂರ್ಣ ಜಲಾವೃತಗೊಂಡು ದ್ವೀಪದಂತಾಗಿದೆ.

ಸ್ಟಾರ್ಮ್‌ ವಾಟರ್‌ ಡ್ರೇನ್‌ ಓಪನ್‌ ಮಾಡಿರುವುದರಿಂದ ರಾಜಕಾಲುವೆಯಿಂದ ನೀರು ವಿಲ್ಲಾ ಮತ್ತು ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದು, ನಿವಾಸಿಗಳು ಮನೆಯಿಂದ ಹೊರಬರದಂತಾಗಿ ಜಲದಿಗ್ಬಂಧನಕ್ಕೊಳಗಾಗಿದ್ದರು. ಜೊತೆಗೆ ರಾಜಕಾಲುವೆಯಿಂದ ನೀರಿನ ವಾಸನೆಗೆ ಜನರು ಕಂಗಾಲಾಗಿ ಬಿಟ್ಟಿದ್ದಾರೆ.

ಮೋಟಾರು ಅಳವಡಿಸಿ ಸಂಗ್ರಹವಾಗಿದ್ದ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಒಂದು ವಾರದ ಹಿಂದೆಯೇ ಪಾಲಿಕೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕಾಲುವೆಯಿಂದ ನೀರು ತುಂಬಿ ನುಗ್ಗಿರುವುದರಿಂದ ಸಂಕಷ್ಟ ಎದುರಾಗಿತ್ತು.

ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ನೀರು ನುಗ್ಗಿ ಹಾಳಾಗಿವೆ. ಒಟ್ಟಿನಲ್ಲಿ ರಾತ್ರಿಯಿಡೀ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಪರದಾಡುವಂತಾಗಿತ್ತು. ಕೆರೆಯಂತಾಗಿದ್ದ ನೀರು ತೆರವಿಗೆ ಬಂದ ಪಾಲಿಕೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಅಲ್ಲಿನ ನಿವಾಸಿಗಳು ಶಾಶ್ವತವಾಗಿ ಪರಿಹಾರ ಕಲ್ಪಿಸಿ, ಪ್ರತಿಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮೊದಲು ರಾಜಕಾಲುವೆಗಳನ್ನು ಸ್ವಚ್ಛ ಮಾಡಿ ಎಂದು ಒತ್ತಾಯಿಸಿದರು.

ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಅಲ್ಲಲ್ಲಿ ಮಳೆಯಾಗಿದೆ.ಉಡುಪಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ತಂತಿ ತುಳಿದು ಇರ್ಷಾದ್‌ (56) ಎಂಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶಿರೂರಿನಲ್ಲಿ ನಡೆದಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸಹ ಭಾರಿ ಮಳೆಯಾಗಿದ್ದು, ಹೌಸಿಂಗ್‌ ಬೋರ್ಡ್‌ ಬಡಾವಣೆಯಲ್ಲಿ ಕಾಂಪೌಂಡ್‌ ಕುಸಿದು ಬಿದ್ದು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ತಾಲ್ಲೂಕಿನ ಕಸ್ಕೆ ಗ್ರಾಮದಲ್ಲಿ ಭಾರೀ ಮರವೊಂದು ಮನೆಯ ಮೇಲೆ ಬಿದ್ದಿದ್ದು ಸಾಕಷ್ಟು ಹಾನಿ ಸಂಭವಿಸಿದೆ.

ಶಿವಮೊಗ್ಗದಲ್ಲೂ ಸಹ ಭಾರೀ ಮಳೆಯಾಗಿದ್ದು, ಮದುವೆ ಛತ್ರಕ್ಕೆ ನೀರು ನುಗ್ಗಿದ್ದು ಬಂದು ಬಳಗ, ನೆಂಟರಿಷ್ಟರಿಗೆ ತೀವ್ರ ತೊಂದರೆಯಾಗಿತ್ತು. ಒಂದೆಡೆ ಛತ್ರದ ಸಿಬ್ಬಂದಿಗಳು ನೀರನ್ನು ಹೊರಹಾಕಿದರು. ಸಕ್ಕರೆನಾಡು ಮಂಡ್ಯದಲ್ಲೂ ಸಹ ಉತ್ತಮ ಮಳೆಯಾಗಿದ್ದು, ಕೆ.ಆರ್‌.ಪೇಟೆ ತಾಲ್ಲೂಕಿನ ಜಕ್ಕನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿ ತೊಂದರೆಯುಂಟಾಗಿತ್ತು. ಭಾರೀ ಮಳೆಗೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ.

ತುಮಕೂರು ಜಿಲ್ಲೆಯಲ್ಲೂ ಸಹ ಮಳೆಯಾಗಿದ್ದು, ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ಜನರು ಪರದಾಡುವಂತಾಗಿದೆ. ಕೊರಟಗೆರೆ ತಾಲ್ಲೂಕಿನ ಬೈರೇನಹಳ್ಳಿ ಗ್ರಾಮದಲ್ಲಿ ಕೊರಟಗೆರೆ-ಗೌರಿಬಿದನೂರು ಹೆದ್ದಾರಿ ಎತ್ತರದ ಕಾಮಗಾರಿಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗದಲ್ಲೂ ಮಳೆಯಾಗಿದ್ದು, ಹೊಸದುರ್ಗ ತಾಲೂಕಿನ ಕೆಲ್ಲೋಡು ಸೇತುವೆ ಮುಳುಗಡೆಯಾಗಿದ್ದು, ವಾಣಿವಿಲಾಸ ಸಾಗರಕ್ಕೆ ನೀರು ಹರಿಯುತ್ತಿದೆ. ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಮದ್ದೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ಬಯಲುಸೀಮೆ ಪ್ರದೇಶಕ್ಕೆ ವರುಣ ಕೃಪೆ ತೋರಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದೇ 23 ರವರೆಗೂ ರಾಜ್ಯದ ವಿವಿಧೆಡೆ ಸಾಧಾರಣ ಹಾಗೂ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

RELATED ARTICLES

Latest News