ಬೆಂಗಳೂರು, ಜು.27- ರಾಜ್ಯದ ಮಲೆನಾಡು ಪಶ್ಚಿಮಘಟ್ಟ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪುಷ್ಯ ಮಳೆಯ ಆರ್ಭಟ ಜೋರಾಗಿದ್ದು, ಹಳ್ಳಕೊಳ್ಳ, ನದಿ-ಕೆರೆಗಳು ತುಂಬಿ ಹರಿಯುತ್ತಿದ್ದು, ಭಾರೀ ಅನಾಹುತವನ್ನು ಸೃಷ್ಟಿಸಿದೆ.
ಚಿಕ್ಕಮಗಳೂರು:
ಕಾಫಿನಾಡಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶೃಂಗೇರಿ, ಕಳಸಾ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನದಿಗಳು ಆಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿಯಲ್ಲಿ ನೆರೆಯ ಆತಂಕ ಎದುರಾಗಿದೆ.
ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ಶೃಂಗೇರಿಯ ಶಾರದಾಮಠ ಸಮೀಪದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಗಾಂಧಿ ಮೈದಾನದ ಪಾರ್ಕಿಂಗ್ ಪ್ರದೇಶ ಹಾಗೂ ಅಂಗಡಿಗಳಿಗೂ ನೀರು ನುಗ್ಗಿದ್ದು ವ್ಯಾಪಾರಿಗಳು ಪರದಾಡುವಂತಾಗಿದೆ.
ಬಾಳೆಹೊನ್ನೂರು ಆರ್ಕಶ್ವರ ಹೊಳೆಹೊನ್ನೂರು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಎರಡು ದಿನಗಳಿಂದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ.
ಚಿಕ್ಕಮಗಳೂರು ನಗರದ ಶರೀಫ್ ಗಲ್ಲಿಯಲ್ಲಿ ಗಾಳಿಗೆ ತೆಂಗಿನ ಮರ ಉರುಳಿಬಿದ್ದು ಮನೆಗೆ ಹಾನಿಯಾಗಿದೆ. ಇದರಿಂದ ಚಿಕ್ಕಮಗಳೂರಿನಿಂದ ಮುತ್ತೂಡಿಗೆ ಹೋಗುವ ರಸ್ತೆ ಬಂದ್ ಆಗಿದೆ.
ಶಿವಮೊಗ್ಗ: ತಾಲ್ಲೂಕಿನ ಭಾರೀ ಮಳೆಯಾಗುತ್ತಿದ್ದು, ತುಂಗಾನದಿಯ ಉಪನದಿ ಮಾಲತಿನದಿ ಉಕ್ಕಿ ಹರಿಯುತ್ತಿದೆ.
ಇದರಿಂದ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿಗೆ ಸಂಪರ್ಕ ಸಂಕಲ್ಪಿಸುವ ರಸ್ತೆ ಕಡಿತಗೊಂಡಿದೆ. ನಿರಂತರ ಮಳೆಯಿಂದಾಗಿ ಲಿಂಗಮನಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಭದ್ರತಾ ದೃಷ್ಟಿಯಿಂದ ಶರಾವತಿ ನದಿಗೆ ನೀರು ಬಿಡುವ ಸಾಧ್ಯತೆಯಿದೆ.
ಕಲಬುರಗಿ:
ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಮನೆಗಳ ಗೋಡೆ ಕುಸಿದು ಬಿದ್ದಿವೆ. ಕಮಲಾಪುರ ತಾಲ್ಲೂಕಿನ ಕುದಮೂಡಾ ಗ್ರಾಮದಲ್ಲಿ ಹಳ್ಳದ ನೀರಿನ ಸೆಳೆತಕ್ಕೆ ಜಾನುವಾರುಗಳು ಕೊಚ್ಚಿ ಹೋಗಿವೆ.
ಚಿತ್ತಾಪುರ ತಾಲ್ಲೂಕಿನ ದಂಡೋತ್ತಿ ಗ್ರಾಮದಲ್ಲಿ ಎರಡು ಮನೆಗಳು ಕುಸಿದಿದ್ದು, ಆದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕಾರವಾರ:
ಭಾರೀ ಮಳೆಗೆ ಜಿಲ್ಲೆ ತತ್ತರಗೊಂಡಿದ್ದು, ಕೆಲವೆಡೆ ಗುಡ್ಡ ಕುಸಿತದಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮಳೆಯಿಂದ ಅಗನಾಶಿನಿ ಗುಂಡಬಾಳ ನದಿಗಳು ಉಕ್ಕಿ ಹರಿಯುತ್ತಿದ್ದು, ಹೊನ್ನಾವರ ಹಾಗೂ ಕುಮುಟದ ಕೆಲವೆಡೆ ಪ್ರವಾಹದ ಭೀತಿ ಎದುರಾಗಿದೆ.
ಕುಮುಟ-ಶಿರಸಿ ಹೆದ್ದಾರಿಯ ದೇವಿಮನೆ ಘಟ್ಟದ ಕ್ಷೇತ್ರಪಾಲೇಶ್ವರ ದೇವಾಲಯದ ಮೆಟ್ಟಿಲುಗಳ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಗುಡ್ಡ ಕುಸಿತವಾಗಿದೆ. ಇದರಿಂದ ಶಿರಸ ಕುಮುಟ ರಸ್ತೆ ಬಂದಾಗಿದೆ. ಸಿದ್ದಾಪುರ, ಬಡಾಳ, ಕುಮುಟ ರಸ್ತೆ ದೊಡ್ಡಮನೆ ಘಟ್ಟದಲ್ಲಿಯೂ ಭೂತ ಕುಸಿತವಾಗಿದೆ.
ಹಾವೇರಿ:
ಭಾರೀ ಮಳೆಯಿಂದಾಗಿ ಬ್ಯಾಡಗಿ ತಾಲ್ಲೂಕಿನ ದುಮ್ಮಿಹಾಳದಲ್ಲಿ ಜೇನುಹೊಂಡ ಕೆರೆಯ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿದ್ದು, ಬೆಳೆಗಳು ಸಂಪೂರ್ಣ ನಾಶವಾಗಿವೆ.
ವಾಲಿದ ಮನೆ ತಪ್ಪಿದ ಭಾರೀ ದುರಂತ
ರಾಯಚೂರು: ಮಳೆಯಿಂದಾಗಿ ಪಾಯಕ್ಕೆ ನೀರಿಳಿದು ನವರಂಗ್ ವರ್ವಾಜ್ ರಸ್ತೆಯಲ್ಲಿರುವ ನಾಲ್ಕು ಹಂತಸ್ತಿನ ಕಟ್ಟಡ ಕುಸಿದು ಪಕ್ಕದ ಕಟ್ಟಡದ ಮೇಲೆ ವಾಲಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸತತ ಮಳೆಯಿಂದಾಗಿ ಚರಂಡಿಯಲ್ಲಿ ನೀರು ಹರಿದಿದ್ದು, ಪಾಯಕ್ಕೆ ನೀರಿಳಿದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸುಮಾರು 14 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಈ ಕಟ್ಟಡ ಮಳೆಗೆ ವಾಲಿದೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಎಚ್.ಡಿ.ಕೋಟೆ:
ತಾಲ್ಲೂಕಿನಲ್ಲಿ ಮಳೆಯಿಂದಾಗಿ ಐದು ಜಲಾಶಯಗಳಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದೆ. ತಾರಕ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗಿದೆ. ಈ ಜಲಾಶಯವನ್ನು ಹುಚ್ಚುಹೊಳೆ, ಬ್ರಹ್ಮದೇವರಗುಂಡಿ, ಆಶ್ವದಕಟ್ಟೆ ಹೊಳೆ ಎಂದು ಕರೆಯಲಾಗುತ್ತದೆ.