ಗುವಾಹಟಿ, ಜೂನ್ 19-ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಬದರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೈನಾಚೋರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಕರೀಂಗಂಜ್ ಎಸ್‌ಪಿ ಪಾರ್ಥ ಪ್ರೋತಿಮ್ ದಾಸ್ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 12:45 ರ ಸುಮಾರಿಗೆ, ಗುಡ್ಡದಲ್ಲಿ ಭೂಕುಸಿತ ಸಂಭವಿಸಿದ ಬಗ್ಗೆ ಮಾಹಿತಿ ಸಿಕ್ಕಿತು, ಅದರಲ್ಲಿ ಮನೆ ಸಂಪೂರ್ಣವಾಗಿ ಸಮಾಧಿಯಾಗಿದೆ. ಬಾದರ್‌ಪುರ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ, ತಮ ಸಿಬ್ಬಂದಿ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು ಎಂದು ಅವರು ತಿಳಿಸಿದರು.
ರಕ್ಷಣಾ ತಂಡವು ತಕ್ಷಣವೇ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಸುಮಾರು ಮೂರು ಗಂಟೆಗಳ ನಂತರ ಐದು ಮತದೇಹಗಳನ್ನು ಹೊರತೆಗೆಯಲಾಯಿತು. ಯಾರೂ ಬದುಕುಳಿದಿಲ್ಲ, ಎಂದು ಅವರು ಹೇಳಿದರು.
ಮೃತರನ್ನು ರೋಯುನ್ ನೆಸ್ಸಾ (55) ಮತ್ತು ಆಕೆಯ ಮಕ್ಕಳಾದ ಸಾಹಿದಾ ಖಾನಂ (18), ಜಾಹಿದಾ ಖಾನಂ (16) ಮತ್ತು ಹಮೀದಾ ಖಾನಂ (11) ಎಂದು ಗುರುತಿಸಲಾಗಿದೆ. ಮಹಿಮುದ್ದೀನ್ ಅವರ ಪುತ್ರ ಮೆಹದಿ ಹಸನ್ ಎಂಬ ಮೂರು ವರ್ಷದ ಮಗು ಕೂಡ ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡಿದೆ ಎಂದು ಎಸ್ಪಿ ತಿಳಿಸಿದ್ದಾರೆ.ಸತತ ಮಳೆಯ ಹಿನ್ನೆಲೆಯಲ್ಲಿ ಅಸ್ಸಾಂನ ಪ್ರವಾಹ ಪರಿಸ್ಥಿತಿ ಮಂಗಳವಾರ ಹದಗೆಟ್ಟಿದ್ದು, ಎಂಟು ಜಿಲ್ಲೆಗಳಲ್ಲಿ 1.61 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.