ಮೈಸೂರು, ಸೆ.20- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಿದ್ದತೆಗಳು ಭರದಿಂದ ಸಾಗಿದ್ದು, ಈ ಬಾರಿ ದಸರಾಗೆ ಭಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, 11 ದಿನದ ಮೈಸೂರು ದಸರಾಗೆ 75000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಂಬೂ ಸವಾರಿಯಲ್ಲಿ ಅಂದಾಜು 15 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಅರಮನೆಯಲ್ಲಿ 48 ಸಾವಿರ, ಬನ್ನಿಮಂಟಪದಲ್ಲಿ 32 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ, ಪಾಸ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತದೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, 30,614 ಸಿಸಿ ಕ್ಯಾಮೆರಾಗಳ ಕಣ್ಣಾವಲು ಇರಲಿದೆ ಎಂದು ಹೇಳಿದರು.
ಪ್ರವಾಸಿಗರ ಅನುಕೂಲಕ್ಕಾಗಿ 43 ಕಡೆ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಮಾರ್ಗಗಳ ಬದಲಾವಣೆ, ಅರಮನೆ ಸುತ್ತ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುತ್ತಿದೆ, ಉತ್ತನಹಳ್ಳಿ ಬಳಿ ಯುವ ದಸರಾಗೆ ತಯಾರಿ ನಡೆಯುತ್ತಿದೆ ಎಂದು ಸೀಮಾ ಲಾಟ್ಕರ್ ವಿವರಿಸಿದರು.
ಮೈಸೂರು ನಗರ ಘಟಕ ವ್ಯಾಪ್ತಿಯಲ್ಲಿ ಕಳೆದ ವರ್ಷಗಳ ದಸರಾ ಹಬ್ಬದ ಸಮಯದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕೆಲ ಯುವಕರು ತುತ್ತೂರಿ(ವುವುಜೆಲಾ)ಗಳಿಂದ ಊದಿ ಕಿರಿಕಿರಿ ಉಂಟು ಮಾಡಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಮೈಸೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವುವುಜೆಲಾ(ತುತ್ತೂರಿ) ಮಾರಾಟ ಮಾಡುವುದನ್ನು ಮತ್ತು ಬಳಸುವುದನ್ನು ನಿಷೇಧಿಸಿದ್ದೇವೆ ಎಂದು ಸೀಮಾ ಲಾಟ್ಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸುಂದರ್ ರಾಜ್, ಬಿಂದು ಮಣಿ ಉಪಸ್ಥಿತರಿದ್ದರು.