ಬೆಂಗಳೂರು,ಆ.1- ಬಿಬಿಎಂಪಿ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿಯಾಗುವುದು ಸ್ವಲ್ಪದರಲ್ಲೇ ತಪ್ಪಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ.
ಮಳೆಯಿಂದ ಶಿಥಿಲಗೊಂಡಿದ್ದ ಮರ ಉರುಳಿಬಿದ್ದ ಸ್ಥಳದಲ್ಲಿ ಪೌರ ಕಾರ್ಮಿಕ ಮಹಿಳೆಯೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಸ್ವತಿನಗರದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಮಳೆಯಾದ ಸಂದರ್ಭದಲ್ಲಿ ಶಿಥಿಲಗೊಂಡಿದ್ದ ಬೃಹತ್ ಮರವೊಂದು ಇಂದು ಬೆಳಿಗ್ಗೆ ರಸ್ತೆ ಪಕ್ಕದ ವಿದ್ಯುತ್‌ಕಂಬದ ಮೇಲೆ ಬಿತ್ತು. ಮರ ಬಿದ್ದ ರಭಸಕ್ಕೆ ವಿದ್ಯುತ್‌ಕಂಬ ಕಟ್ಟಾಗಿ ನೆಲಕ್ಕೆ ಬಿತ್ತು. ಈ ಸಂದರ್ಭದಲ್ಲಿ ಕಸ ಸಂಗ್ರಹ ಮಾಡುತ್ತಿದ್ದ ಪೌರ ಕಾರ್ಮಿಕ ಮಹಿಳೆಯೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಮನೆ ಮೇಲೆ ಮರ ಬಿದ್ದು ಕಟ್ಟಡ, ಮನೆ ಮುಂದೆ ನಿಂತಿದ್ದ ಕಾರಿಗೂ ಹಾನಿಯಾಗಿದೆ. ಇಂದು ಉರುಳಿಬಿದ್ದಿರುವ ಮರ ಶಿಥಿಲಗೊಂಡಿದ್ದು ಅದನ್ನು ತೆರವುಗೊಳಿಸುವಂತೆ ಈ ಹಿಂದೆ ಬಿಬಿಎಂಪಿಗೆ ದೂರು ನೀಡಲಾಗಿತ್ತು. ಆದರೂ ಪಾಲಿಕೆಯವರು ಇದುವರೆಗೂ ಮರವನ್ನು ತೆರವುಗೊಳಿಸದಿರುವುದೇ ಇಂದಿನ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.