ಹಾಸನ,ಮೇ 26- ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗಿದೆ. ಸಕಲೇಶಪುರ ಮೂಡಿಗೆರೆ ಸುತ್ತಮುತ್ತ ಉತ್ತಮವಾಗಿ ಮಳೆ ಸುರಿಯುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ.
9404 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ನದಿಗೆ 300, ಎಡದಂಡೆ ನಾಲೆಗೆ 2900 ಬಲದಂಡ ನಾಲೆಗೆ 25 ಕ್ಯೂಸೆಕ್ ಸೇರಿದಂತೆ 3225 ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ ಎಂದು ಜಲಾಶಯದ ಎಂಜಿನಿಯರ್ ತಿಳಿಸಿದ್ದಾರೆ .
ಸದ್ಯ ಜಲಾಶಯದಲ್ಲಿ 2899 ಅಡಿಗಳಷ್ಟು ನೀರಿನ ಸಂಗ್ರಹವಿದ್ದು ಕಳೆದ ವರ್ಷ ಇದೆ ಅವಧಿಯಲ್ಲಿ 2880 ಅಡಿಗಳಷ್ಟು ಹಾಗೂ ಇಂದು 19.063 ಟಿಎಂಸಿ ನೀರಿನ ಸಂಗ್ರಹವಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 9.687 ಟಿಎಂಸಿ ನೀರಿನ ಸಂಗ್ರಹವಿತ್ತು.
ಬೇಲೂರು ತಾಲ್ಲೂಕಿನಲ್ಲಿ ಭಾರಿ ಮಳೆ : ವಿದ್ಯುತ್ ಸಂಪರ್ಕ ಕುರಿತು ಕುಡಿಯುವ ನೀರಿಗೆ ತೊಂದರೆ
ತಾಲೂಕಿನಾಧ್ಯಂತ ಮಳೆ ಮುಂದುವರಿದಿದ್ದು ಬಾರಿ ಗಾಳಿ ಮಳೆಯ ಅರ್ಭಟಕ್ಕೆ ಮರಗಿಡಗಳು ನೆಲಕ್ಕುರುಳಿದರೆ, ರೈತರು ಜಮೀನು, ತೋಟ, ಹೊಲ ಗದ್ದೆಗಳಿಗೆ ತೆರಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ತಾಲೂಕಿನಾಧ್ಯಂತ ಜನ ಜೀವನ ಅಸ್ತವ್ಯವಸ್ತವಾಗಿದೆ.
ತಾಲೂಕಿನಲ್ಲಿ ಇಲ್ಲಿವರೆಗೂ ವಾಡಿಕೆಯಂತೆ ಬರಬೇಕಿದ್ದ ಮಳೆ ಈ ಬಾರಿ ಮುಂಗಾರು ಪ್ರಾರಂಭಕ್ಕೂ ಮುನ್ನವೇ ವಾಡಿಕೆಗಿಂತ 25 ಮಿಲಿ ಮೀಟರ್ಗಗೂ ಹೆಚ್ಚು ಮಳೆಯಾಗಿದೆ. ಅಲ್ಲದೆ ಈಗ ಬರುತ್ತಿರುವ ಗಾಳ ಮಳೆಯಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳಿಂದ ಜನರು ಮನೆಗಳಿಂದ ಹೊರ ಬಾರದಂತ್ತಾಗಿದ್ದರೆ, ರೈತರು ಜಮೀನು, ತೋಟ, ಹೊಲ ಗದ್ದೆಗಳಿಗೆ ತೆರಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಮತ್ತೆ ಮತ್ತೆ ಮರಗಳು ಬೀಳುತ್ತಿರುವುದರಿಂದ ವಾಹನಗಳ ಸವಾರರು ಓಡಾಡಲು ಭಯ ಪಡುವಂತ್ತಾಗಿದೆ. ಇನ್ನೂ ಗಾಳಿ ಮಳೆಗೆ ಸಿಲುಕಿ ವಿದ್ಯುತ್ ಕಂಬಗಳು ಬಿದ್ದಿದ್ದು ಅದನ್ನು ಸರಿ ಪಡಿಸಲು ಮಳೆ ತಡೆಯೊಡ್ಡುತ್ತಿರುವುದರಿಂದ ತಾಲೂಕಿನ ಬೇಕನಹಳ್ಳಿ, ಹುನುಗನಹಳ್ಳಿ, ಕಣದೂರು, ಚುಂಗನಹಳ್ಳಿ ಹಾಗೂ ಐರವಳ್ಳಿ, ಸಿಂಗಾಪುರ, ದೇವಾಲಾಪುರ ಬಾಣಸವಳ್ಳಿ ಸೇರಿದಂತೆ ಗೆಂಡೇಹಳ್ಳಿ ಭಾಗದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದರೆ, ಮೊಬೈಲ್‌ಗಳನ್ನು ಚಾರ್ಜ್ ಮಾಡಲು ಸಾಧ್ಯವಾಗದೆ ಸಾಕಷ್ಟು ಗ್ರಾಮಗಳಲ್ಲಿ ಜನರು ಕತ್ತಲಲ್ಲಿ ಜೀವನ ಕಳೆಯುವಂತ್ತಾಗಿದೆ.
ಇದರೊಂದಿಗೆ ಬೇಲೂರು ಪಟ್ಟಣದಲ್ಲೂ ವಿದ್ಯುತ್ ಸರಭರಾಜಿನಲ್ಲಿ ವಿದ್ಯುತ್ ವ್ಯತ್ಯಯದಿಂದ ಪುರಸಭೆ ವ್ಯಾಪ್ತಿಯ ಕೆಲವೊಂದು ಬಡಾವಣೆಗಳಲ್ಲಿ ಕುಡಿಯುವ ನೀರುಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಗಾಳಿ ಮಳೆ ಬರುತ್ತಿರುವುದರಿಂದ ಅಲ್ಲಲ್ಲಿ ಮನೆಯ ಗೋಡೆ ಕುಸಿದಿರುವ ಘಟನೆಯೂ ನಡೆದಿದೆ. ಈಗಾಗಲೇ ಕಳೆದ ವರ್ಷದ ಮಳೆಯಿಂದಲೇ ಭರ್ತಿಯಾಗಿದ್ದ ಕೆರೆ ಕಟ್ಟೆಗಳಿಗೆ ಈಗ ಮತ್ತಷ್ಟು ನೀರು ಹರಿದು ಬರುತ್ತಿರುವುದರಿಂದ ಅವುಗಳೂ ಸಹ ಬೇಗನೇ ತುಂಬುವ ಸಾಧ್ಯತೆ ಇದೆ.
ಇದರೊಂದಿಗೆ ಯಗಚಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನೀರೆಲ್ಲ ನದಿ ಮೂಲಕ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಜಲಾಶಯ ಭರ್ತಿಯಾಗಿದ್ದರಿಂದ ಶನಿವಾರ ಐದು ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಜನ, ಜಾನುವಾರುಗಳು, ಆಸ್ತಿಪಾಸ್ತಿಗಳನ್ನು ರಕ್ಷಿಸಿಕೊಂಡು ಯಾರೂ ಸಹ ನದಿ ಹಾಗೂ ನಾಲೆ ಪಕ್ಷಕ್ಕೆ ಹೋಗದಂತೆ ನೋಡಿ ಕೊಳ್ಳಬೇಕಿದೆ.