Saturday, November 23, 2024
Homeರಾಜ್ಯಮಹಾನಗರ ಪಾಲಿಕೆಯಾಗಿ ಹಾಸನ ಮೇಲ್ದರ್ಜೆಗೆ : ಇಲ್ಲಿದೆ ಸಚಿವ ಸಂಪುಟ ಸಭೆಯ ಹೈಲೈಟ್ಸ್

ಮಹಾನಗರ ಪಾಲಿಕೆಯಾಗಿ ಹಾಸನ ಮೇಲ್ದರ್ಜೆಗೆ : ಇಲ್ಲಿದೆ ಸಚಿವ ಸಂಪುಟ ಸಭೆಯ ಹೈಲೈಟ್ಸ್

Hassan to be upgraded as a Municipal Corporation: Here are the highlights of the Cabinet Meeting Highlights

ಬೆಂಗಳೂರು,ಅ.28- ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಬೆಳಗಾವಿಯಲ್ಲಿ ಡಿಸೆಂಬರ್‌ ಎರಡು ಇಲ್ಲವೇ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚಳಿಗಾಲದ ಅಧಿವೇಶನದ ದಿನಾಂಕ ನಿರ್ಧಾರ ಮಾಡುವುದನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗುವುದು ಎಂದರು.

ಎಐಸಿಸಿ ಅಧಿವೇಶನ ನಡೆಯಲಿದ್ದು, ಅದಕ್ಕೆ ಅನುಕೂಲವಾಗುವ ಸಮಯ ಹೊಂದಾಣಿಕೆಯಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ದಿನಾಂಕವನ್ನು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಲ್ಲಿ ಸಾಹಸ, ಕೃಷಿ, ಕರಾವಳಿ, ಬೀಚ್‌ ಪ್ರವಾಸೋದ್ಯಮ, ಪಾರಂಪರಿಕ, ಪರಿಸರ, ಶೈಕ್ಷಣಿಕ, ಒಳನಾಡು, ಸಾಹಿತ್ಯ, ಕಡಲು, ವೈದ್ಯಕೀಯ, ಗಣಿಗಾರಿಕೆ, ಬುಡಕಟ್ಟು ವಿವಾಹ ಸೇರಿದಂತೆ ವಿವಿಧ ರೀತಿಯ ಪ್ರವಾಸಗಳು ಈ ನೀತಿ ವ್ಯಾಪ್ತಿಗೆ ಒಳಪಡಲಿದೆ ಎಂದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಲ್ಲಿನ ರಾಜ್ಯಸರ್ಕಾರದ ಈಕ್ವಿಟಿ ಷೇರುಗಳ ಪ್ರಮಾಣವನ್ನು ಶೇ.49ರಿಂದ 90ಕ್ಕೆ ಹೆಚ್ಚಿಸಲು ಸಂಪುಟ ಸಭೆ ಸಮತಿಸಿದೆ.ಬೆಂಗಳೂರಿನ ಜನರಲ್‌ ತಿಮಯ್ಯ ರಸ್ತೆಯಲ್ಲಿನ ಕೆಎಸ್‌‍ಆರ್‌ಪಿ ಒಂದನೇ ಪಡೆಯ ಆವರಣದಲ್ಲಿ ಪೊಲೀಸ್‌‍ ಇಲಾಖೆಯ ಸೆಂಟ್ರಲ್‌ ಕಮಾಂಡ್‌ ಸೆಂಟರ್‌ ಅನ್ನು ಒಳಗೊಂಡಂತೆ ಸುಸಂಘಟಿತ ಪೊಲೀಸ್‌‍ ಭವನ ಕಾಮಗಾರಿಯ 102.80 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತಕ ಅನುಮೋದನೆ ದೊರೆತಿದೆ ಎಂದು ಹೇಳಿದರು.

ದೇವನಹಳ್ಳಿ-ವಿಜಯಪುರ-ಎಚ್‌.ಕ್ರಾಸ್‌‍-ವೇಮಗಲ್‌-ಮಾಲೂರು-ತಮಿಳುನಾಡು ಗಡಿವರೆಗೆ 110.40 ಕಿ.ಮೀ. ಉದ್ದದ ರಸ್ತೆಯನ್ನು ಹೈಬ್ರಿಡ್‌ ವರ್ಷಾಸನ ಮಾದರಿಯಲ್ಲಿ ಒಟ್ಟಾರೆ 3,190 ಕೋಟಿ ರೂ.ಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲೇ ಪಿಪಿಪಿ ಮಾಡೆಲ್‌ನಡಿ ನಿರ್ಮಾಣ ಮಾಡಲಾಗುವುದು ಎಂದರು.

ಹಾಸನ ಮೇಲ್ದರ್ಜೆಗೆ :
ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ದೊರೆತಿದೆ. ಬೀದರ್‌ ವಿಮಾನಯಾನ ಕಾರ್ಯಾಚರಣೆಗೂ ಅನುಮೋದನೆ ದೊರೆತಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯ ಕಲ್ಪಿಸಲು 39.07 ಕೋಟಿ ರೂ. ಅಂದಾಜು ವೆಚ್ಚಕ್ಕೆ ಒಪ್ಪಿಗೆ ದೊರೆತಿದೆ ಎಂದ ಅವರು, ರಾಯಚೂರು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರನ್ನು ಮರುನಾಮಕರಣ ಮಾಡಲು ಸಮತಿಸಿದೆ ಎಂದರು.

ಕರ್ನಾಟಕ ಗೃಹಮಂಡಳಿಯು ಆನೇಕಲ್‌ ತಾಲ್ಲೂಕು ಸೂರ್ಯನಗರದ ಒಂದನೇ ಹಂತದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಎರಡು ಬಹುಮಹಡಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. 101 ಕೋಟಿ ರೂ. ಅಂದಾಜು ಮೊತ್ತದ ಈ ಯೋಜನೆಗೆ ಆಡಳಿತಾತಕ ಅನುಮೋದನೆ ದೊರೆತಿದೆ ಎಂದು ಹೇಳಿದರು.

ಶಿವಮೊಗ್ಗ ವಿಮಾನನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದ 127 ಕೋಟಿ ರೂ. ಮೊತ್ತದ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಮತಿಸಲಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಬಾರದಿದ್ದರೆ ಪರಿಶೀಲಿಸುತ್ತೇವೆ ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮಂಜೂರಾದ 7,045 ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗಳ ಕಾಲಾವಧಿಯನ್ನು ಗುತ್ತಿಗೆ ಆಧಾರದಲ್ಲಿ 2025 ರ ಮಾರ್ಚ್‌ ಅಂತ್ಯದವರೆಗೆ ಮುಂದುವರೆಸಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದಿಂದ 2024-25ನೇ ಸಾಲಿಗೆ ಆರ್‌ಒಪಿ ಯಲ್ಲಿ ಅನುಮೋದನೆಯಾಗಿರುವ ಒಟ್ಟು 278.64 ಕೋಟಿ ರೂ.ಗಳ ಅನುದಾನದಲ್ಲಿ ಭರಿಸಿ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದರು.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ-2024 ಕ್ಕೆ ಅನುಮೋದನೆ ದೊರೆತಿದೆ. ವಿವಾದಿತ ತೆರಿಗೆ ಮಿತಿಯನ್ನು ತರಲು ಅನುಕೂಲವಾಗಲಿದೆ. ಜಿಎಸ್‌‍ಟಿ ಮೇಲನವಿ ಹಕ್ಕು ಸ್ಥಾಪನೆಗೂ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಹುದ್ದೆಗಳಿಗೆ ಅಭಿಯೋಜನಾ ಇಲಾಖೆಯ 12 ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಮತಿಸಲಾಗಿದೆ ಎಂದರು.

ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ಪರತಂತ್ರ ಜೀವಿ ಪ್ರಯೋಗಾಲಯಗಳು ಸೇರಿದಂತೆ ಈ ನಾಲ್ಕು ಘಟಕಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು ಕರ್ನಾಟಕ ಕೃಷಿ ಅಭಿವೃದ್ಧಿ ಏಜೆನ್ಸಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.ಶಾಲಾ ಶಿಕ್ಷಣ ಇಲಾಖೆಯ 33 ಮಂದಿ ಗ್ರೇಡ್‌ 1, ವೃತ್ತಿ ಶಿಕ್ಷಕರಿಗೆ ಗ್ರೂಪ್‌ ಬಿ ವೃಂದದ ವಿಷಯ ಪರಿವೀಕ್ಷಕರು ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ ಚರ್ಚಿಸಲಾಗಿದೆ.

ಬೆಳಗಾವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅದನ್ನು ಪಾಲನೆ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಲು ನಿರ್ಣಯಿಸಲಾಗಿದೆ.
ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್‌‍ ಠಾಣೆಗಳೆಂದು ಘೋಷಿಸಲು ತೀರ್ಮಾನಿಸಲಾಗಿದೆ. ಈ ಠಾಣೆಗಳ ನಿರ್ವಹಣೆಗೆ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೂ ಮಂಜೂರಾತಿ ನೀಡಲಾಗಿದೆ. ಪರಿಶಿಷ್ಟರ ದೌರ್ಜನ್ಯ ಪ್ರಕರಣಗಳ ತುರ್ತು ವಿಲೇವಾರಿಗಾಗಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

RELATED ARTICLES

Latest News