ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ, ಭೂಮಿ, ಚಿನ್ನಬೆಳ್ಳಿ ಮೇಲೆ ಹೂಡಿಕೆ ಮಾಡದಿರುವುದೇ ಸೂಕ್ತ ಎಂಬ ಸಲಹೆ ಕೇಳಿಬಂದಿದೆ.ಮಿತಿಮೀರಿದ ಟ್ರಾಫಿಕ್‌ಜಾಮ್, ಬಗೆಹರಿಯದ ರಸ್ತೆ ಗುಂಡಿಗಳ ಸಮಸ್ಯೆ, ವಿದ್ಯುತ್ ಶುಲ್ಕ ಏರಿಕೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಉದ್ಯಮಗಳ ವಲಸೆ, ಕುಸಿದ ರಿಯಲ್ ಎಸ್ಟೇಟ್ ಉದ್ಯಮ, ಸಾವಿರಾರು ಫ್ಲಾಟ್‌ಗಳು ಖಾಲಿ ಖಾಲಿ, ಐಟಿಬಿಟಿ ಕಂಪನಿಗಳು ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಸಾವಿರಾರು ಉದ್ಯೋಗಗಳ ಕಡಿತ.. ಇದು ದೇಶದಲ್ಲಿ ಮೂರನೇ ಅತಿದೊಡ್ಡ ತೆರಿಗೆ ನೀಡುವ ಐಟಿಬಿಟಿ ಕ್ಷೇತ್ರವೊಂದರಲ್ಲೇ ಶೇ.20ರಿಂದ 30ರಷ್ಟು ತೆರಿಗೆ ಪಾವತಿಸುವ ರಾಜಧಾನಿ ಬೆಂಗಳೂರು ಮಹಾನಗರದ ಚಿತ್ರಣವಾಗಿದೆ.
ಇಲ್ಲಿ ಬಂಡವಾಳ ಹೂಡುವವರು ಮುಗಿಬಿದ್ದು ಬರುತ್ತಿದ್ದರು. ಪೈಪೋಟಿಯಿಂದ ತಾಮುಂದು, ನಾಮುಂದು ಎಂದು ದೇಶ ವಿದೇಶಗಳಿಂದ ಆಗಮಿಸಿ ವಿವಿಧ ರಾಜ್ಯಗಳಿಂದ ಬಂಡವಾಳ ಹೂಡಿಕೆ ಮಾಡಿ ವಿವಿಧ ಉದ್ಯಮಗಳು ಕೈಗಾರಿಕೆಗಳನ್ನು ಸ್ಥಾಪಿಸಿ ಲಾಭ ಗಳಿಸುವುದರ ಜೊತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬೆಂಗಳೂರು ನಗರ ಸಾಕ್ಷಿಯಾಗಿತ್ತು.
ಐಟಿ ಹಬ್ ಎಂದೇ ಪ್ರಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲಿ ಕಾಶೀರದಿಂದ ಕನ್ಯಾಕುಮಾರಿವರೆಗೆ ಉದ್ಯೋಗಾಕಾಂಕ್ಷಿಗಳು ಆಗಮಿಸಿ ಉದ್ಯೋಗ ಪಡೆದು ಇಲ್ಲಿ ನೆಲೆಸಿದ್ದು ಸರಣೀಯ.ವಿದೇಶಿ ಕಂಪನಿಗಳು ಕೂಡ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿ ದೊಡ್ಡ ದೊಡ್ಡ ಕಂಪನಿಗಳನ್ನು ಸ್ಥಾಪನೆ ಮಾಡಿ ಭಾರೀ ಪ್ರಮಾಣದ ಲಾಭ ಗಳಿಕೆ ಮಾಡುತ್ತಿದ್ದರು. ಇನ್ಫೋಸಿಸ್ , ಆಕ್ಸೆಂಚರ್, ವಿಪ್ರೋ, ಎಲ್ ಅಂಡ್‌ಟಿ, ಟಾಟಾ ಕನ್ಸಲ್ಟಿಂಗ್ ಕಂಪನಿ, ನೆಸ್ಲೆ ಕಂಪನಿ ಸೇರಿದಂತೆ ನೂರಾರು ಕಂಪನಿಗಳು ಇಲ್ಲಿ ತಲೆ ಎತ್ತಿ ಲಕ್ಷಾಂತರ ಉದ್ಯೋಗಗಳನ್ನು ನೀಡುತ್ತಿದ್ದವು.
ಪ್ರಸ್ತುತ ಬೆಂಗಳೂರಿನ ಸ್ಥಿತಿ ಅಯೋಮಯವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಕಾಡುವುದರ ಜೊತೆಗೆ ಕೃತಕಬುದ್ಧಿಮತ್ತೆ(ಎಐ) ವಿಸ್ತಾರವಾಗುತ್ತಿರುವುದರಿಂದ ಸಾಫ್ಟ್ ವೇರ್ ಕಂಪನಿಗಳಲ್ಲಿ ಸಾವಿರಾರು ಉದ್ಯೋಗಗಳನ್ನು ಕಡಿತ ಮಾಡಲಾಗುತ್ತಿದೆ. ಈಗಾಗಲೇ ಟಿಸಿಎಸ್ ಕಂಪನಿಗಳಲ್ಲಿ 6 ಸಾವಿರ, ನೆಸ್ಲೆ ಕಂಪನಿಯಲ್ಲಿ 16 ಸಾವಿರ ಸೇರಿದಂತೆ ಹಲವು ಕಂಪನಿಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ.
ಅಲ್ಲದೆ, ಈ ಕಂಪನಿಗಳು ಇಲ್ಲಿರುವ ಉದ್ಯೋಗಿಗಳನ್ನು ನಂಬಿಕೊಂಡು ಇದಕ್ಕೆ ಹೊಂದಿಕೊಂಡಂತೆ ಬೆಂಗಳೂರಿನ ಸುತ್ತಮುತ್ತ ಸಾವಿರಾರು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದ್ದವು. ಪಿಜಿಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಈ ಕಂಪನಿಗಳಲ್ಲಿ ಉದ್ಯೋಗ ಕಡಿತವಾಗುತ್ತಿದ್ದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಂಪನಿಗಳು ಬೇರೆ ರಾಜ್ಯಗಳಿಗೆ ಸ್ಥಳಾಂತರ ಆಗುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗಳು ಖಾಲಿ ಖಾಲಿ ಹೊಡೆಯುತ್ತಿವೆ.
ಅಲ್ಲದೆ ಹೊಸ ಕಂಪನಿಗಳು, ಕೈಗಾರಿಕೆಗಳು ಆಂಧ್ರ ಮುಂತಾದ ಇತರ ರಾಜ್ಯಗಳಲ್ಲಿ ಸ್ಥಾಪನೆಗೊಳ್ಳುತ್ತಿವೆ. ಸಾವಿರಾರು ಜನರಿಗೆ ಉದ್ಯೋಗಾವಕಾಶ ಅಲ್ಲಿ ಲಭಿಸುತ್ತಿದೆ.
ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚತೊಡಗಿದೆ. ಸರ್ಕಾರದ ಯೋಜನೆಯಾದ ಗೃಹಜ್ಯೋತಿ(ಉಚಿತ ವಿದ್ಯುತ್) ಹೊರತುಪಡಿಸಿದರೆ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಇದು ಕೂಡ ಕೈಗಾರಿಕಾ ವಲಯದಲ್ಲಿ ನಷ್ಟಕ್ಕೆ ಆಸ್ಪದ ಉಂಟು ಮಾಡಿದೆ. ಹಾಗಾಗಿ ಹೂಡಿಕೆದಾರರು ಬೆಂಗಳೂರು ನಗರದಲ್ಲಿ ಮೊದಲಿನಂತೆ ಬಂಡವಾಳ ಹೂಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಎದುರಾಗಿದೆ. ಚಿನ್ನ-ಬೆಳ್ಳಿ ಬೆಲೆ ಗಗನಮುಖಿಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಖರೀದಿಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಚಿನ್ನ-ಬೆಳ್ಳಿ, ರಿಯಲ್ ಎಸ್ಟೇಟ್ ಉದ್ಯಮ , ಭೂಮಿಯ ಮೇಲೆ ಬಂಡವಾಳ ಹೂಡುವುದನ್ನು ಸದ್ಯ ಮಾಡದಿರುವುದು ಸೂಕ್ತ. ಇನ್ನೆರಡು ಮೂರು ವರ್ಷ ಜನ ಇವುಗಳ ಮೇಲೆ ಹಣ ಹೂಡಿಕೆ ಮಾಡಬಾರದೆಂದು ಹಲವು ತಜ್ಞರು ಸಲಹೆ ನೀಡಿದ್ದಾರೆ. ಭೂಮಿ, ಚಿನ್ನ, ಬೆಳ್ಳಿ, ರಿಯಲ್ ಎಸ್ಟೇಟ್ ಉದ್ಯಮ, ಷೇರು ಮಾರುಕಟ್ಟೆಯಂತೆ ಕ್ಷಣ ಕ್ಷಣದಲ್ಲಿ ಏರುಪೇರು ಆಗುತ್ತಿರುತ್ತದೆ. ಆದರೆ ಬೆಂಗಳೂರಿನ ಪರಿಸ್ಥಿತಿ ಗಮನಿಸಿದರೆ ಸದ್ಯ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಹೂಡುವ ಬಂಡವಾಳಕ್ಕೆ ಲಾಭ ಬರುವ ನಿರೀಕ್ಷೆ ಇಲ್ಲ. ಹಾಗಾಗಿ ಇದರಿಂದ ಹಿಂದೆ ಸರಿಯುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ.