Friday, November 22, 2024
Homeರಾಷ್ಟ್ರೀಯ | Nationalಅಯೋಧ್ಯೆ ಉಗ್ರರ ಟಾರ್ಗೆಟ್ , ಕರ್ನಾಟಕದಲ್ಲೂ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ಅಯೋಧ್ಯೆ ಉಗ್ರರ ಟಾರ್ಗೆಟ್ , ಕರ್ನಾಟಕದಲ್ಲೂ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ನವದೆಹಲಿ,ಜ.16- ದೇಶಾದ್ಯಂತ ಹಬ್ಬದ ವಾತಾವರಣ ಉಂಟು ಮಾಡಿರುವ ಅಯೋಧ್ಯೆ ರಾಮಮಂದಿರಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ಕೆ ಉಗ್ರರ ಕರಿನೆರಳು ಆವರಿಸಿದ್ದು, ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚಿಸಿದೆ.

ವಿಮಾನ ನಿಲ್ದಾಣ, ಬಂದರುಗಳು, ಪ್ರಮುಖ ದೇವಾಲಯಗಳು, ಸೂಕ್ಷ್ಮ , ಅತಿಸೂಕ್ಷ್ಮ ಸೇರಿದಂತೆ ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಬೇಕೆಂದು ಗುಪ್ತಚರ ವಿಭಾಗ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.ಗುಪ್ತಚರ ವಿಭಾಗ ಸೂಚನೆ ಕೊಟ್ಟ ಹಿನ್ನಲೆಯಲ್ಲಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧ , ಹೈಕೋರ್ಟ್, ರಾಜಭವನ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಜ್ಪೆ ವಿಮಾನ ನಿಲ್ದಾಣ,
ಬಂದರುಗಳು, ಇಸ್ಕಾನ್ ದೇವಸ್ಥಾನ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರ ದೇಗುಲಗಳಲ್ಲಿ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ.

ಅತಿಸೂಕ್ಷ್ಮ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಸೇರಿದಂತೆ ಹಲವು ಕಡೆ ಹದ್ದಿನ ಕಣ್ಣಿಡಲಾಗಿದೆ. ಅಯೋಧ್ಯೆಯಲ್ಲಿ ಇದೇ 22ರಂದು ರಾಮಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಹಾಗೂ ಐಸಿಸ್ ಪರ ಒಲವು ಹೊಂದಿರುವ ಕೆಲವು ಶಂಕಿತ ಉಗ್ರರು ಅಹಿತಕರ ಘಟನೆ ನಡೆಸಬಹುದೆಂಬ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರದಲ್ಲಿ ವಿವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಥುರಾದ ಶಾಹಿ ಈದ್ಗಾ ಮಸೀದಿ ಸರ್ವೆಗೆ ಸುಪ್ರೀಂ ತಡೆ

ವಿಶೇಷವಾಗಿ ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನ, ಭಟ್ಕಳ, ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ, ಶಿವಮೊಗ್ಗದ ಅಮೀರಮಾ ಸರ್ಕಲ್ ಮತ್ತಿತರ ಕಡೆ ತಕ್ಷಣವೇ ಭದ್ರತೆಯನ್ನು ಹೆಚ್ಚಳ ಮಾಡುವಂತೆ ಸೂಚನೆ ಕೊಡಲಾಗಿದೆ. ಕೇಂದ್ರ ಗುಪ್ತಚರ ವಿಭಾಗ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಜ.22ರವರೆಗೂ ಹೈ ಅಲರ್ಟ್ ಆಗಿರಬೇಕು ಎಂದು ಜಿಲ್ಲಾ ಎಸ್‍ಪಿಗಳಿಗೂ ಪ್ರತ್ಯೇಕವಾಗಿ ಗುಪ್ತಚರ ವಿಭಾಗ ಸೂಚಿಸಿದೆ.

ಕಮೀಷನರೇಟ್ ಹಾಗೂ ಎಲ್ಲಾ ಜಿಲ್ಲಾ ಎಸ್‍ಪಿಗಳ ಜೊತೆ ನಡೆದ ಸಭೆಯಲ್ಲಿ ಶ್ರೀರಾಮನ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪೆÇಲೀಸರ ಕಣ್ಗಾವಲಿಗೆ ಸೂಚನೆ ನೀಡಲಾಗಿದೆ.ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿನ ದೇವಾಲಯಗಳ ಬಳಿ ಅಲರ್ಟ್ ಇರಬೇಕು. ಸೂಕ್ಷ್ಮ ಪ್ರದೇಶವೆನ್ನಿಸಿದರೆ ಕೆಎಸ್‍ಆರ್‍ಪಿ ನಿಯೋಜನೆ ಮಾಡುವಂತೆಯೂ ಹೇಳಲಾಗಿದೆ.

ಪೊಲೀಸರ ಕಣ್ಗಾವಲು:
ದೇವಾಲಯಗಳಲ್ಲಿ ಪೂಜೆ ಪುನಸ್ಕಾರ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು. ದೇವಸ್ಥಾನ ಬಳಿಯಲ್ಲಿ ರಾಜಕೀಯವಾಗಿ ಮಾತನಾಡುವುದು, ಪ್ರತಿಭಟನೆ ಮಾಡುವುದು, ಸಮಾಜದ ಶಾಂತಿಭಂಗ ತರುವ ಘೋಷಣೆ ಕೂಗುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಿಸಬೇಕು ಎಂದು ನಿರ್ದೇಶನ ನೀಡಿದೆ.

ಇಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವವರ ಮೇಲೆ ಕಣ್ಣಿಡುವಂತೆ ಸೂಚಿಸಲಾಗಿದ್ದು, ಜನವರಿ 22ರವರೆಗೆ ಎಲ್ಲಾ ಅಧಿಕಾರಿಗಳು ತುರ್ತು ಪರಿಸ್ಥಿತಿ ಹೊರತುಪಡಿಸಿ ತಮ್ಮ ವ್ಯಾಪ್ತಿ ಬಿಟ್ಟು ಎಲ್ಲಿಯೂ ತೆರಳಬಾರದೆಂದು ಸೂಚನೆ ನೀಡಲಾಗಿದೆ.

RELATED ARTICLES

Latest News