ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಭೀತಿ, ಹೈ ಅಲರ್ಟ್ ಘೋಷಣೆ

Spread the love

ಶ್ರೀನಗರ,ಸೆ.16- ಆರ್ಟಿಕಲ್ 370 ರದ್ಧತಿ ನಂತರ ಜಮ್ಮು ಮತ್ತು ಕಾಶ್ಮೀರ ಒಂದೆಡೆ ಪಾಕಿಸ್ತಾನ ಮತ್ತೊಂದೆಡೆ ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗಿದ್ದು, ಯಾವುದೇ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಮತ್ತೆ ಮುನ್ನಚ್ಚರಿಕೆ ವಹಿಸಲಾಗಿದ್ದು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವ ಮಧ್ಯೆಯೇ ಕಣಿವೆ ರಾಜ್ಯಕ್ಕೆ ಮತ್ತೆ ಉಗ್ರರ ದಾಳಿ ಆತಂಕ ಎದುರಾಗಿದೆ.

ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಕಳೆದ ಕೆಲ ದಿನಗಳಿಂದ ಸುಮಾರು 25 ಉಗ್ರರು ಗುಪ್ತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಅಂಗಡಿ ಮುಂಗಟ್ಟು ತೆರೆಯದಂತೆ ವರ್ತಕರಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಶೋಪಿಯಾನ್‍ನಲ್ಲಿ ಬಾಗಿಲು ತೆರೆದಿದ್ದ ಆಟೋ ಮೊಬೈಲ್ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಮತ್ತೊಂದೆಡೆ ಸಿಸಿಟಿವಿ ಕ್ಯಾಮರಾಗಳನ್ನು ಬಂದ್ ಮಾಡುವಂತೆ ಕೆಲ ವರ್ತಕರು ಮತ್ತು ಮಾಧ್ಯಮ ಕಚೇರಿಗಳಿಗೆ ಉಗ್ರರು ಬೆದರಿಕೆಯ ಸೂಚನೆ ರವಾನಿಸಿದ್ದಾರೆ. ಇದು ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿಗೆ ಸಂಚು ರೂಪಿಸಿರುವ ಅನುಮಾನವನ್ನು ಭದ್ರತಾ ಪಡೆಗಳಲ್ಲಿ ಹುಟ್ಟುಹಾಕಿದೆ. ಈ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ. ಶ್ರೀನಗರದಲ್ಲಿ ಉಗ್ರರು ನುಸುಳಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ರಾಜ್‍ಭಾಗ್, ಜವಾಹರ್ ನಗರ, ಲಾಲ್‍ಚೌಕ್‍ನಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಅಡಗಿರುವ ಉಗ್ರರ ಪತ್ತೆಗೆ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ಧತಿ ನಂತರ ಕಣಿವೆ ಪ್ರಾಂತ್ಯದಲ್ಲಿ ಆಗಾಗ ಪಾಕ್ ಪ್ರೇರಿತ ಉಗ್ರರ ದಾಳಿ, ಆತಂಕಗಳು ಎದುರಾಗುತ್ತಲೇ ಇದ್ದು, ಯಾವುದೇ ಎಚ್ಚರಿಕೆಯನ್ನು ಲಘುವಾಗಿ ಪರಿಣಮಿಸದಂತಹ ಸ್ಥಿತಿ ನಿರ್ಮಾಣವಾಗಿದೆ.