Monday, November 25, 2024
Homeರಾಜ್ಯವಾಹನಗಳಿಗೆ ಹೈಬೀಮ್‌ ಹೆಡ್‌ಲೈಟ್‌ ಬಳಕೆ : 4 ದಿನದಲ್ಲಿ 5 ಸಾವಿರ ಕೇಸ್ ದಾಖಲು

ವಾಹನಗಳಿಗೆ ಹೈಬೀಮ್‌ ಹೆಡ್‌ಲೈಟ್‌ ಬಳಕೆ : 4 ದಿನದಲ್ಲಿ 5 ಸಾವಿರ ಕೇಸ್ ದಾಖಲು

ಬೆಂಗಳೂರು,ಜು.7- ವಾಹನಗಳಿಗೆ ಹೆಚ್ಚು ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವ ಹೈಬೀಮ್‌ ಹೆಡ್‌ಲೈಟ್‌ ಬಳಸಿ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ರಾಜ್ಯ ಪೊಲೀಸರು ಬಿಸಿ ಮುಟ್ಟಿಸಿದ್ದು, ನಾಲ್ಕು ದಿನಗಳ ಅವಧಿಯಲ್ಲಿ 5 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಗರದಲ್ಲಿ 2,153 ಪ್ರಕರಣ, ಮೈಸೂರು 302, ತುಮಕೂರು 237, ಉ.ಕನ್ನಡ 236, ರಾಯಚೂರು 260, ವಿಜಯನಗರ 182 ಪ್ರಕರಣಗಳು ಸೇರಿದಂತೆ ರಾಜ್ಯಾದ್ಯಂತ ಜುಲೈ 1 ರಿಂದ 4 ರವರೆಗೆ 5 ಸಾವಿರ ಪ್ರಕರಣಗಳು ದಾಖಲಾಗಿವೆ.

ಹೆಚ್ಚು ಬೆಳಕು ಹೊರಸೂಸುವಂತಹ ಎಲ್‌ಇಡಿ ದೀಪಗಳಿಂದ ಎದುರುಗಡೆ ಬರುವ ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಈ ಹಿಂದೆಯೇ ರಾಜ್ಯ ರಸ್ತೆ ಹಾಗೂ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಅಲೋಕ್‌ ಕುಮಾರ್‌ ಅವರು, ಹೈಬೀಮ್‌ ಲೈಟ್‌ ಬಳಸದಂತೆ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದರೂ ಸಹ ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 500 ರೂ., ಎರಡನೇ ಬಾರಿ 1,000 ರೂ. ದಂಡ ವಿಧಿಸಲಾಗುತ್ತದೆ.

ಈ ಬಗ್ಗೆ ಅಲೋಕ್‌ಕುಮಾರ್‌ರವರು ಪ್ರತಿಕ್ರಿಯಿಸಿ, ವಾಹನಗಳಲ್ಲಿ ಪ್ರಖರ ಬೆಳಕು ಹೊರಸೂಸುವಂತಹ ಎಲ್‌ಇಡಿ ದೀಪ ಬಳಸುವುದರಿಂದ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಹೆಚ್ಚಾಗುತ್ತಿವೆ. ಹಾಗಾಗಿ ವಾಹನ ಸವಾರರು ಕೇಂದ್ರ ಮೋಟಾರು ಕಾಯಿದೆಯ ಮಾರ್ಗಸೂಚಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ವಾಹನಗಳಲ್ಲಿ ಸೂಕ್ತವಾದ ಹೆಡ್‌ಲೈಟ್‌ ಬಳಸದಿದ್ದರೆ ಇತರ ವಾಹನ ಚಾಲಕರಿಗೆ ಅಡ್ಡಿಯುಂಟಾಗಿ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ. ವಾಹನದ ಮುಂಬದಿಯ ರಸ್ತೆ ಗೋಚರಿಸದಿದ್ದಾಗ, ಮಂಜು, ಹೊಗೆ, ಮಳೆ, ದಟ್ಟ ಕತ್ತಲು ಕವಿದ ಸಂದರ್ಭಗಳಲ್ಲಿ ಮಾತ್ರ ಹೈಬೀಮ್‌ ಲೈಟ್‌ ಬಳಸಬಹುದಾಗಿದೆ.

ಒಂದು ವೇಳೆ ನಿಮಗೆ ರಸ್ತೆ ಕಾಣಿಸದಿದ್ದಾಗ ಅಥವಾ ನಿಮ ಎದುರಿನಿಂದ ಯಾವುದೇ ವಾಹನ ಬರುತ್ತಿಲ್ಲ ಎಂದರಷ್ಟೇ ಇಂತಹ ಹೈಬೀಮ್‌ ಲೈಟ್‌ ಬಳಸಬಹುದಾಗಿದೆ.ಜನವಸತಿ ಪ್ರದೇಶಗಳಲ್ಲಿ, ನಗರ ಪ್ರದೇಶದಲ್ಲಿ, ವಾಹನಗಳು ಬರುತ್ತಿದ್ದಾಗ, ಸಂಚಾರ ದಟ್ಟಣೆ ಇರುವ ಕಡೆಗಳಲ್ಲಿ ಹೈಬೀಮ್‌ ಲೈಟ್‌ ಬಳಸುವುದನ್ನು ನಿಷಿದ್ಧವಾಗಿದೆ ಎಂದು ಅಲೋಕ್‌ ಕುಮಾರ್‌ರವರು ತಿಳಿಸಿದ್ದಾರೆ.

RELATED ARTICLES

Latest News