ಬೆಂಗಳೂರು,ಜ.13- ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಬೆಂಗಳೂರಿಗೆ ಆಗಮಿಸಿದ್ದು, ಸರಣಿ ಸಭೆಗಳ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ಪಕ್ಷದ ಪದಾಧಿಕಾರಿಗಳು, ಸಚಿವರು, ಪ್ರಮುಖ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಹಲವಾರು ಮಂದಿ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಅದೇ ರೀತಿ ಇನ್ನೂ ಕೆಲವು ನಾಯಕರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಸಾಕಷ್ಟು ಗೊಂದಲಗಳನ್ನು ಮೂಡಿಸಿದ್ದಾರೆ.
ಜಾತಿವಾರು ಡಿನ್ನರ್ ಸಭೆಗಳು ನಡೆದಿವೆ. ಜಾತಿಜನಗಣತಿ ಸಮೀಕ್ಷಾ ವರದಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಪಕ್ಷದಲ್ಲಿ ಗೊಂದಲದ ವಾತಾವರಣವಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡುವ ಸಲುವಾಗಿ ಸುರ್ಜೇವಾಲ ಸಭೆ ಮಹತ್ವದ ಬೆಳವಣಿಗೆಯಾಗಿದೆ.
ಅಧಿಕಾರ ಹಂಚಿಕೆ ಸೇರಿದಂತೆ ಯಾವುದೇ ವಿಚಾರಗಳಿದ್ದರೂ ಅದು ಕಾಂಗ್ರೆಸ್ನ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾರೂ ಹೇಳಿಕೆಗಳನ್ನು ನೀಡಿ ಗೊಂದಲಗಳನ್ನು ಮೂಡಿಸಬಾರದು ಎಂದು ರಣದೀಪ್ ಸಿಂಗ್ ಸುರ್ಜೇವಾಲ ಸಭೆಯಲ್ಲಿ ಕಟ್ಟಪ್ಪಣೆ ಮಾಡಿದ್ದಾರೆ.
ಕೆಲವು ಸಚಿವರು ಈ ವೇಳೆ ತಮದೇ ಆದ ದೂರುಗಳನ್ನು ಹೇಳಲು ಮುಂದಾಗಿದ್ದಾರೆ. ಆದರೆ ಅದಕ್ಕೆ ಮಾನ್ಯತೆ ನೀಡದ ಸುರ್ಜೇವಾಲ ಅವರು ಸಂಪುಟದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ. ಒಂದು ವೇಳೆ ದೂರುಗಳೇ ಪ್ರಮುಖವಾಗಿದ್ದರೆ ಸಂಪುಟದಿಂದ ಹೊರಗಿದ್ದು, ನಿಮ ಹೋರಾಟ ಮುಂದುವರೆಸಿ ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.
ಕೆಲವು ಶಾಸಕರೂ ಕೂಡ ಸಚಿವರ ಧೋರಣೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿದ್ದಂತೆ ಭ್ರಷ್ಟಾಚಾರದ ಆರೋಪಗಳು ಕಾಂಗ್ರೆಸ್ ಸರ್ಕಾರದಲ್ಲೂ ಬರುತ್ತಿವೆ. ಸಚಿವರು ಹಣ ಇಲ್ಲ ಎಂದು ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಆದರೆ ಕಮಿಷನ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆಯಾಗುತ್ತಿಲ್ಲ ಎಂಬೆಲ್ಲಾ ದೂರುಗಳನ್ನು ನೀಡಿರುವುದಾಗಿ ತಿಳಿದುಬಂದಿದೆ.
ಸಂಜೆ ಶಾಸಕಾಂಗ ಸಭೆ :
ಕಾಂಗ್ರೆಸ್ ಪಕ್ಷದಲ್ಲಿನ ಡಿನ್ನರ್ ಮೀಟಿಂಗ್ಗಳಿಗೆ ಕಡಿವಾಣ ಹಾಕುವ ಸಲುವಾಗಿ ಹಾಗೂ ಶಾಸಕರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲು ಸಂಜೆ ಖಾಸಗಿ ಹೋಟಲ್ನಲ್ಲಿ ಶಾಸಕಾಂಗ ಸಭೆ ಕರೆಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಭೆಯ ನೇತೃತ್ವ ವಹಿಸಲಿದ್ದಾರೆ.
ಈವರೆಗಿನ ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿ ಸಭೆ ಆಯೋಜಿಸಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿರುವ ಪರಿಶಿಷ್ಟ ಜಾತಿಯ ಸಚಿವರ, ಶಾಸಕರ ಪ್ರತ್ಯೇಕ ಸಭೆ ಕರೆಯಲಾಗಿತ್ತು. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದಾಗ ಹಲವಾರು ಶಾಸಕರು ತಮ ಅಸಮಾಧಾನ ಹೊರಹಾಕಿದ್ದರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗುತ್ತಿಲ್ಲ. ಇದರ ಬಗ್ಗೆ ಚರ್ಚೆ ಮಾಡಲು ಸಭೆ ಕರೆದರೆ ಅದಕ್ಕೂ ಅಡ್ಡಿಪಡಿಸಲಾಗುತ್ತಿದೆ. ಇದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಲಾಯಿತು.
ಒಂದು ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್ನ್ನು ದಲಿತ ವಿರೋಧಿ ಎಂದು ಸಂಪುಟದ ಸಚಿವರೇ ಬಹಿರಂಗವಾಗಿ ಹೇಳುವ ಮೂಲಕ ಪ್ರತಿರೋಧಗಳು ಕಂಡುಬಂದವು. ಪಕ್ಷದಲ್ಲಿ ಅರಾಜಕತೆ ಮತ್ತು ಅಸಹಜ ಬೆಳವಣಿಗೆಗಳು ಹೆಚ್ಚಾಗುತ್ತಿರುವ ಸುಳಿವರಿತ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಈ ರೀತಿಯ ಗೊಂದಲಗಳು ಉಂಟಾಗಬಾರದು ಹಾಗೂ ವಿರೋಧಪಕ್ಷಗಳಿಗೆ ಆಹಾರವಾಗಬಾರದು ಎಂಬ ಕಾರಣಕ್ಕೆ ಶಾಸಕಾಂಗ ಸಭೆಯನ್ನು ಆಯೋಜಿಸಲಾಗಿದೆ.
ವಿರೋಧಪಕ್ಷಗಳು ಸಂಕ್ರಾಂತಿ ನಂತರ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ಹೇಳುತ್ತಲೇ ನಾನಾರೀತಿಯ ವದಂತಿಗಳನ್ನು ಹರಡುತ್ತಿವೆ. ಒಂದು ರೀತಿ ಇದು ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಪ್ರಶ್ನಿಸಲು ಪ್ರಚೋದನೆ ನೀಡುವ ಬೆಳವಣಿಗೆಯಾಗಿದೆ ಎಂಬ ವ್ಯಾಖ್ಯಾನಗಳಾಗುತ್ತಿವೆ. ಈ ಕಾರಣಕ್ಕೆ ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮತ್ತು ಅವರ ದೂರು ದುಮಾನಗಳನ್ನು ಕೇಳಲು ಮಹತ್ವದ ಚರ್ಚೆ ನಡೆಯುತ್ತಿದೆ.