Monday, March 31, 2025
Homeರಾಷ್ಟ್ರೀಯ | Nationalಕಾಂಗ್ರೆಸ್‌‍ ಜಿಲ್ಲಾಧ್ಯಕ್ಷರ ಜತೆ ಹೈಕಮಾಂಡ್‌ ಸುದೀರ್ಘ ಸಭೆ

ಕಾಂಗ್ರೆಸ್‌‍ ಜಿಲ್ಲಾಧ್ಯಕ್ಷರ ಜತೆ ಹೈಕಮಾಂಡ್‌ ಸುದೀರ್ಘ ಸಭೆ

High Command Holds Long Meeting with Congress District Presidents

ನವದೆಹಲಿ,ಮಾ.28- ಹಲವು ಚುನಾವಣೆಗಳಲ್ಲಿ ಸೋಲು ಕಂಡು ಸೊರಗಿರುವ ಕಾಂಗ್ರೆಸ್‌‍ ಪಕ್ಷಕ್ಕೆ ಹೊಸ ಸ್ವರೂಪ ನೀಡಲು ಮುಂದಾಗಿರುವ ವರಿಷ್ಠರು ಜಿಲ್ಲಾ ಕಾಂಗ್ರೆಸ್‌‍ ಅಧ್ಯಕ್ಷರ ಜೊತೆ ಮ್ಯಾರಥಾನ್‌ ಸಭೆ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್‌‍ನ ಎಲ್ಲಾ ಜಿಲ್ಲೆಗಳ ಅಧ್ಯಕ್ಷರನ್ನು ದೆಹಲಿಗೆ ಕರೆಸಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನಾಲ್ಕು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

ಹಲವು ಕಡೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಅಲ್ಪಸಂಖ್ಯಾತರನ್ನು ಪಟ್ಟಿಯಿಂದ ಕೈಬಿಟ್ಟು ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನಗಳಾಗುತ್ತಿವೆ. ಅದೇ ರೀತಿ ಇನ್ನು ಕೆಲವೆಡೆ ಅಸಹಜವಾಗಿ ಮತದಾರರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಇದರ ಮೇಲೆ ಕಾಂಗ್ರೆಸ್‌‍ ಕಾರ್ಯಕರ್ತರು ನಿಗಾ ಇರಿಸಬೇಕು. ಸ್ಥಳೀಯ ಮಟ್ಟದಲ್ಲಿ ಹೆಚ್ವುವರಿಯಾಗಿ ಸೇರ್ಪಡೆಯಾಗಿರುವವರನ್ನು ಮತ್ತು ಯಾರ ಹೆಸರನ್ನು ಯಾವ ಕಾರಣಕ್ಕಾಗಿ ತೆಗೆದು ಹಾಕಲಾಗಿದೆ ಎಂಬ ಸ್ಪಷ್ಟತೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಪಕ್ಷ ಸಂಘಟನೆಯ ವಿಚಾರದಲ್ಲಿ ಅತ್ಯಂತ ಕ್ರಿಯಾತಕ ವಾಗಿ ಕೆಲಸ ಮಾಡಬೇಕು. ಸದಸ್ಯತ್ವ ನೋಂದಣಿಯಲ್ಲಿ ಉನ್ನತ ಹುದ್ದೆಯಲ್ಲಿರುವವರಿಂದ ಆರಂಭಿಸಿ ಕೆಳಹಂತದ ಕಾರ್ಯಕರ್ತರವರೆಗೆ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸಾಮಾಜಿಕ ಜಾಲತಾಣ, ಮಾಧ್ಯಮಗಳ ನಿರ್ವಹಣೆ ಕುರಿತಂತೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಇದೇ ವೇಳೆ ಪ್ರಸ್ತಾಪಿಸಲಾಗಿದೆ. ಮಾಧ್ಯಮಗಳು ಕಾಂಗ್ರೆಸ್‌‍ ವಿಷಯದಲ್ಲಿ ಸುಳ್ಳು ಹಾಗೂ ನಕಾರಾತಕ ವಿಚಾರವಾಗಿಯೇ ಬಿಂಬಿಸುತ್ತಿವೆ. ಪಕ್ಷ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮಾಡಬೇಕು. ಅಪಪ್ರಚಾರಗಳಿಗೆ ಕಾಲ ಕಾಲಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿದ್ದಾರೆ.

ಈ ಹಿಂದೆ ವಿಧಾನಸಭೆ, ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಿಲ್ಲಾಧ್ಯಕ್ಷರ ಅಭಿಪ್ರಾಯಗಳನ್ನು ಕೇಳಲಾಗಿತ್ತೇ ಎಂಬ ಕುರಿತು ರಾಹುಲ್‌ ಗಾಂಧಿ ಜಿಲ್ಲಾಧ್ಯಕ್ಷರ ಬಳಿ ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್‌‍ ಪಕ್ಷಕ್ಕೆ ಹೊಸ ಸ್ವರೂಪ ನೀಡುವ ಅಗತ್ಯವಿದೆ. ಕೇಡರ್‌ ಬೇಸ್‌‍ ಆಧಾರಿತವಾಗಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ವರಿಷ್ಠರು ಸೂಚಿಸಿದ್ದಾರೆ.

ಸಭೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡುವುದು, ಕಾಂಗ್ರೆಸ್‌‍ನ ಆಸ್ತಿಗಳ ಸಂರಕ್ಷಣೆಗಾಗಿ ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಸಭೆ ನಡೆಸಿದ್ದಾರೆ. ಸರ್ಕಾರಕ್ಕಿಂತಲೂ ಪಕ್ಷವೇ ದೊಡ್ಡದು. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.

ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಪ್ರಭಾವಿ ನಾಯಕರಾಗಿದ್ದರೂ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡಲೇಬೇಕು. ಸಚಿವರು, ಸಾಂವಿಧಾನಿಕ ಹುದ್ದೆಯಲ್ಲಿರುವವರು ಜಿಲ್ಲಾ ಪ್ರವಾಸ ಕೈಗೊಂಡಾಗ ಸ್ಥಳೀಯ ಕಾಂಗ್ರೆಸ್‌‍ ಕಚೇರಿಗಳಿಗೆ ತೆರಳಿ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚೆ ನಡೆಸಬೇಕು ಎಂದು ವರಿಷ್ಠರು ಸೂಚಿಸಿದ್ದಾರೆಂದು ತಿಳಿಸಿದ್ದಾರೆ.

RELATED ARTICLES

Latest News