ಬೆಂಗಳೂರು,ಜ.16- ಕಾಂಗ್ರೆಸ್ ಪಕ್ಷದಲ್ಲಿ ಕಂಡುಬರುತ್ತಿರುವ ಬೇಗುದಿಯನ್ನು ತಹಬದಿಗೆ ತರಲು ಕಾಂಗ್ರೆಸ್ ಹೈಕಮಾಂಡ್ ಮತ್ತೆ ಮಧ್ಯ ಪ್ರವೇಶ ಮಾಡುವ ಸಾಧ್ಯತೆಯಿದೆ. ಇದೇ 21 ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಅದರ ಪೂರ್ವ ಸಿದ್ಧತೆಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಾಳೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಈ ವೇಳೆ ಬೆಳಗಾವಿ ಜಿಲ್ಲೆಯ ನಾಯಕರೊಂದಿಗೆ ಚರ್ಚೆ ನಡೆಸಿ ಸತೀಶ್ ಜಾರಕಿಹೊಳಿಯವರ ಬಂಡಾಯವನ್ನು ಶಮನಗೊಳಿಸಲು ಪ್ರಯತ್ನಿಸುವ ನಿರೀಕ್ಷೆಗಳಿವೆ. ಡಿ.ಕೆ.ಶಿವಕುಮಾರ್ ಕೂಡ ನಾಳೆ ಬೆಳಗಾವಿಗೆ ತೆರಳುತ್ತಿದ್ದು, ಸುರ್ಜೇವಾಲ ಅವರ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಸತೀಶ್ ಜಾರಕಿಹೊಳಿ ಇಂದು ಸಚಿವ ಸಂಪುಟ ಸಭೆಯನ್ನು ಮುಗಿಸಿಕೊಂಡು ನಾಳೆ ಬೆಳಗಾವಿಗೆ ಆಗಮಿಸಬೇಕು, ಸಮಾವೇಶದ ಪೂರ್ವ ಸಿದ್ಧತೆ ಗಮನಿಸಲು ಹಾಜರಿರಬೇಕೆಂದು ಸುರ್ಜೇವಾಲ ಅವರ ಕಚೇರಿಯಿಂದ ಈಗಾಗಲೇ ಸೂಚನೆ ರವಾನೆಯಾಗಿದೆ.
ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಇಡೀ ಕಾರ್ಯಕ್ರಮದ ಉಸ್ತುವಾರಿ, ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಹೆಗಲಿಗೇರಿದೆ. ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಸತೀಶ್ ಜಾರಕಿಹೊಳಿ ಕೆಲಸ ಮಾಡಬೇಕಿದೆ. ಈ ಸಂದರ್ಭದಲ್ಲಿ ಪರಸ್ಪರ ಚರ್ಚೆಯಾಗಿ ಪರಿಸ್ಥಿತಿ ತಿಳಿಯಾಗಬಹುದು ಎಂಬ ಅಂದಾಜುಗಳಿವೆ.