Friday, November 22, 2024
Homeರಾಜಕೀಯ | Politicsಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ

ಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ

ಬೆಂಗಳೂರು,ನ.28- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಚುಕ್ಕಾಣಿ ಹಿಡಿದರೆ, ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆರ್. ಅಶೋಕ್ ಅವರು ನೇಮಕಗೊಂಡ ಬಳಿಕ ಪಕ್ಷದ ಕೆಲ ನಾಯಕರ ಅಸಮಾಧಾನ ಸ್ಪೋಟಗೊಂಡಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ.

ಬಿಜೆಪಿಯೊಳಗಿನ ಒಂದು ಬಣ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ. ಆಯ್ಕೆ ಮಾಡುವ ಮುನ್ನ ದೆಹಲಿ ವರಿಷ್ಠರು ಸೌಜನ್ಯಕ್ಕಾದರೂ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಿಲ್ಲ. ಹಿರಿಯರನ್ನು ಕಡೆಗಣಿಸಿ ಕೇವಲ ಯಡಿಯೂರಪ್ಪ ಪುತ್ರ ಎಂಬ ಒಂದೇ ಕಾರಣಕ್ಕಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಒಂದು ಬಣ ಅಸಮಾಧಾನ ವ್ಯಕ್ತಪಡಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋಲು, ರಾಜ್ಯದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳ ಕುರಿತು ವರಿಷ್ಠರ ಜೊತೆ ಚರ್ಚಿಸಲು ಡಿ.7 ರಂದು ಕೆಲವು ಅಸಮಾಧಾನಿತ ನಾಯಕರು ದೆಹಲಿಗೆ ತೆರಳಲಿದ್ದಾರೆ.
ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಮತ್ತಿತರ ನಾಯಕರು ಡಿ.7ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆಯೇ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಆರ್.ಅಶೋಕ್ ಅವರನ್ನು ನೇಮಕ ಮಾಡಿರುವುದಕ್ಕೂ ವಿರೋ ಬಣ ಕುದಿಯುತ್ತಿದೆ. ಅದರಲ್ಲೂ ಪ್ರತಿಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಂದು ಹಂತದಲ್ಲಿ ಬಿ.ವೈ. ವಿಜಯೇಂದ್ರ ಅವರು, ಯತ್ನಾಳ್ ಅವರ ಮನೆಗೆ ಹೋಗಿ ಭೇಟಿ ಮಾಡುವುದಾಗಿ ಹೇಳಿದ್ದರು. ನನ್ನ ಮನೆಗೆ ಅವರು ಬರುವ ಅಗತ್ಯವಿಲ್ಲ ಎಂದು ಯತ್ನಾಳ್ ನೇರವಾಗಿಯೇ ಹೇಳಿದ್ದಾರೆ.
ಈ ಅಸಮಾಧಾನ ಇನ್ನಷ್ಟು ಬೆಳೆಯ ಬಹುದು ಎಂಬ ಆತಂಕಕ್ಕೆ ಒಳಗಾಗಿರುವ ವರಿಷ್ಠರು, ಸೋಮಣ್ಣ , ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಕೆಲವು ನಾಯಕರನ್ನು ದೆಹಲಿಗೆ ಬರುವಂತೆ ಕರೆದಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಮತ್ತು ಆರ್.ಅಶೋಕ್ ಅವರನ್ನು ಎರಡು ಪ್ರಮುಖ ಸ್ಥಾನಗಳಿಗೆ ಆಯ್ಕೆ ಮಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿರುವುದರಿಂದ ರಾಷ್ಟ್ರೀಯ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.
ಭೇಟಿ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ವೇಳೆ ತಮಗೆ ಪಕ್ಷದಲ್ಲಿ ಯಾವ ರೀತಿ ಹಿನ್ನಡೆ ಆಯಿತು, ಇದಕ್ಕೆ ಯಾರು ಕಾರಣ ಎಂಬುದು ಸೇರಿ ಇತರೆ ವಿಷಯಗಳನ್ನು ವರಿಷ್ಠರ ಗಮನಕ್ಕೆ ತರಲು ಮುಂದಾಗಿದ್ದಾರೆ.

ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಕುಟುಂಬದ ಹಿತ ಕಾಪಾಡಲು ಒಳ ಒಪ್ಪಂದ ಮಾಡಿಕೊಂಡು ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಿದರೂ ಪುನಃ ಇಂಥವರಿಗೆ ಪಕ್ಷದಲ್ಲಿ ಮಣೆ ಹಾಕಿದರೆ ನಾವು ಹೇಗೆ ರಾಜಕಾರಣ ಮಾಡಬೇಕು ಎಂಬ ಪ್ರಶ್ನೆ ಮುಂದಿಡಲಿದ್ದಾರೆ.

ಒಂದು ರಾಜಕೀಯ ಪಕ್ಷ ಕೇವಲ ಕುಟುಂಬಕ್ಕೆ ಸೀಮಿತವಾಗಬಾರದು ಎಂಬ ಪ್ರಶ್ನೆ ಅಸಮಾಧಾನಿತರದ್ದು. ಇದಕ್ಕೆ ವರಿಷ್ಠರು ಅಸಮಾಧಾನಿತರನ್ನು ಯಾವ ರೀತಿ ಸಮಾಧಾನಪಡಿಸುತ್ತಾರೆ ಎಂಬುದೇ ಸದ್ಯಕ್ಕಿರುವ ಕುತೂಹಲ.

RELATED ARTICLES

Latest News