Monday, March 31, 2025
Homeರಾಜಕೀಯ | Politicsಹಾದಿಬೀದಿಯಲ್ಲಿ ಕಚ್ಚಾಡುತ್ತಿರುವ ಬಿಜೆಪಿ ಬಣಗಳಿಗೆ ಹೈಕಮಾಂಡ್‌ 'ನೋಟೀಸ್‌‍' ಎಚ್ಚರಿಕೆ

ಹಾದಿಬೀದಿಯಲ್ಲಿ ಕಚ್ಚಾಡುತ್ತಿರುವ ಬಿಜೆಪಿ ಬಣಗಳಿಗೆ ಹೈಕಮಾಂಡ್‌ ‘ನೋಟೀಸ್‌‍’ ಎಚ್ಚರಿಕೆ

High Command warns BJP factions fighting

ಬೆಂಗಳೂರು,ಮಾ.26– ಪಕ್ಷದ ಶಿಸ್ತು ಉಲ್ಲಂಘಿಸಿ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ಕೊಡುತ್ತಿದ್ದ ಭಾಷಣ ಶೂರರಿಗೆ ನೋಟೀಸ್‌‍ ಜಾರಿ ಮಾಡುವ ಮೂಲಕ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಕೇಂದ್ರ ಬಿಜೆಪಿ ವರಿಷ್ಠರು ರವಾನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಣದವರೇ ಇರಲಿ ಇಲ್ಲವೇ ಯತ್ನಾಳ್‌ ಇರಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಲ್ಲ. ಶಿಸ್ತು ಮೀರಿದರೆ ಎಲ್ಲರಿಗೂ ಇದೇ ಪಾಠ ಎಂದು ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದಾರೆ.

ಈವರೆಗೂ ಕೇಂದ್ರ ಚುನಾವಣಾ ಬಿಜೆಪಿ ಶಿಸ್ತು ಸಮಿತಿ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಶೋಕಾಸ್‌‍ ನೋಟೀಸ್‌‍ ನೀಡಿದ್ದು, ಎಲ್ಲೋ ಒಂದು ಕಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಅಂದರೆ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜ ಯೇಂದ್ರ ಪರವಾಗಿ ಮಾತನಾಡಿದವರಿಗೆ ನೋಟಿಸ್‌‍ ಕೊಡದೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆಂಬ ಗೊಂದಲ ಕಾಯಕರ್ತರಲ್ಲಿ ಮೂಡಿತ್ತು.

ಇದಕ್ಕೆ ತೆರೆ ಎಳೆದಿರುವ ವರಿಷ್ಠರು, ನಮಗೆ ವ್ಯಕ್ತಿ ಮುಖ್ಯವಲ್ಲ. ಕಾರ್ಯಕರ್ತರಿದ್ದರೆ ಪಕ್ಷ ಉಳಿಯುತ್ತದೆ. ಶಿಸ್ತು ಉಲ್ಲಂಘನೆ ಮಾಡಿದವರು ಯಡಿಯೂರಪ್ಪನವರ ಬೆಂಬಲಿಗರೇ ಇರಲಿ ಇಲ್ಲವೇ ಯತ್ನಾಳ್‌ ಕಡೆಯವರೇ ಇರಲಿ. ಅಶಿಸ್ತನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಬಾರದೆಂದು ರಾಜ್ಯ ಉಸ್ತುವಾರಿಗಳ ಮೂಲಕ ಸಲಹೆ ರೂಪದಲ್ಲಿ ಮನವಿ ಮಾಡಲಾಗಿತ್ತು. ತಮನ್ನು ಯಾರೂ ಏನೂ ಮಾಡಲಾಗದು ಎಂಬ ಕೆಲವರು ಅಹಂನಿಂದಾಗಿ ಮಾಧ್ಯಮಗಳ ಮುಂದೆ ಪ್ರತಿದಿನ ನಾಲಿಗೆ ಹರಿಬಿಡುತ್ತಿದ್ದರು. ಇದೀಗ ಶಾಸಕರಾದ ಎಸ್‌‍.ಟಿ.ಸೋಮಶೇಖರ್‌, ಬಿ.ಪಿ.ಹರೀಶ್‌, ಶಿವರಾಂ ಹೆಬ್ಬಾರ್‌, ಮಾಜಿ ಸಚಿವರಾದ ಕಟ್ಟಾಸುಬ್ರಹಣ್ಯ ನಾಯ್ಡು, ಎಂ.ಪಿ.ರೇಣುಕಾಚಾರ್ಯ ಅವರಿಗೆ ಮೂರು ದಿನದೊಳಗೆ ಉತ್ತರ ಕೊಡುವಂತೆ ನೋಟಿಸ್‌‍ ಕೊಟ್ಟಿರುವುದು ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗಿದೆ.

ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಮಾಡುವವರನ್ನು ನಾವು ಸಹಿಸುವುದೇ ಇಲ್ಲ. ಅವರು ಎಷ್ಟೇ ದೊಡ್ಡವರಿರಲಿ ಕಾರ್ಯಕರ್ತರ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಈ ಮೂಲಕ ಭಿನ್ನಮತೀಯರಿಗೆ ರವಾನಿಸಲಾಗಿದೆ.

ಈ ಹಿಂದೆ ರಾಜ್ಯ ಬಿಜೆಪಿಯ ಬಣ ರಾಜಕಾರಣ ಹಾಗೂ ಬಹಿರಂಗ ಹೇಳಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಬಿಜೆಪಿ ವರಿಷ್ಠರು, ಕೋರ್‌ ಕಮಿಟಿ ಸದಸ್ಯರೂ ಸೇರಿದಂತೆ ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದರು.

ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ವಿಪಕ್ಷ ನಾಯಕ ಆರ್‌.ಅಶೋಕ್‌ ಅವರನ್ನು ಬಿಜೆಪಿ ಕಚೇರಿಗೆ ಕರೆಸಿಕೊಂಡು ದೀರ್ಘ ಕಾಲ ಚರ್ಚೆ ನಡೆಸಿ ವರಿಷ್ಠರ ಸಂದೇಶವನ್ನು ಎಲ್ಲರಿಗೂ ರವಾನಿಸುವಂತೆ ಸೂಚನೆ ನೀಡಿದ್ದರು. ಎಲ್ಲರೂ ಪಕ್ಷದ ನಿರ್ದೇಶನ ಪಾಲಿಸಬೇಕು. ಏನೇ ಆಕ್ಷೇಪಗಳಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚೆಯಾಗಬೇಕೆಂದು ಸೂಚನೆ ನೀಡಿದ್ದರು.

ಪಕ್ಷದ ಹಿರಿಯರು, ಕೋರ್‌ ಕಮಿಟಿ ಸದಸ್ಯರು ಕೂಡ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಹೀಗಾದರೆ ಪಕ್ಷದ ಶಿಸ್ತಿನ ಪ್ರಶ್ನೆ ಏನಾಗಬೇಕು ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ನೆನಪಿಡಿ. ಎಲ್ಲ ವಿದ್ಯಮಾನವನ್ನು ವರಿಷ್ಠರು ಗಮನಿಸುತ್ತಿದ್ದಾರೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದರು.

ಕೆಲ ನಾಯಕರಲ್ಲಿ ಶಿಸ್ತಿಲ್ಲ, ನಾಯಕರೇ ಶಿಸ್ತು ಮೈಗೂಡಿಸಿಕೊಳ್ಳದಿದ್ದರೆ ಕಾರ್ಯಕರ್ತರು ಶಿಸ್ತಾಗಿ ಇರಲು ಹೇಗೆ ಸಾಧ್ಯ? ಪಕ್ಷಕ್ಕಿಂತ ದೊಡ್ಡವರೆಂದು ಭಾವಿಸಬಾರದು. ಪಕ್ಷ ನೆಲಸಮ ಮಾಡಲು ಹೋಗಬೇಡಿ ಎಂದು ಮೌಖಿಕ ಸೂಚನೆ ಕೊಟ್ಟಿದ್ದರು. ಶಾಸಕರು, ನಾಯಕರು ಯಾರೂ ಪಕ್ಷದ ಶಿಸ್ತು ಮೀರಬಾರದು. ಪಕ್ಷ ತಾಯಿ ಇದ್ದಂತೆ ಸರ್ಕಾರ ಮಗು ಇದ್ದಂತೆ. ಯಾವ ನಾಯಕರೂ ಪಕ್ಷವನ್ನು ನೆಲಸಮ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಪಕ್ಷವನ್ನು ನೆಲಸಮ ಮಾಡಲು ಮುಂದಾದರೆ ನಾವು ಸಹಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದರು.

ನಮ ನಾಯಕರಲ್ಲಿ ಕೆಲವರಿಗೆ ಶಿಸ್ತು ಇಲ್ಲ. ಪಕ್ಷಕ್ಕಿಂತ ನಾವು ದೊಡ್ಡವರು ಎಂಬ ಭಾವನೆ ಕೆಲವರಲ್ಲಿ ಇದ್ದಂತಿದೆ. ಈಗಲೂ ನಾನು ಮನವಿ ಮಾಡುತ್ತೇನೆ. ಶಾಸಕರು, ನಾಯಕರು, ಸಚಿವರು ಯಾರೂ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವಯುತವಾಗಿ ಕಾಣಬೇಕು ಎಂದು ಹೇಳಿದ್ದರು.

RELATED ARTICLES

Latest News